ಅನಾರೋಗ್ಯ ಕಾಡಿದಾಗ ಭಾರತೀಯರು ಹೆಚ್ಚಾಗಿ ಆಯುರ್ವೇದ ಪದ್ದತಿ ಮೊರೆ ಹೋಗ್ತಾರೆ. ಕೊರೊನಾ ಸಂದರ್ಭದಲ್ಲಿ ದೇಶದಲ್ಲಿ ಕಷಾಯದ ಬಳಕೆ ಹೆಚ್ಚಾಗಿದೆ. ಅನಿವಾರ್ಯ ಕಾರಣಗಳಿಗೆ ಮಾತ್ರ ಆಲೋಪತಿ ಔಷಧ ಬಳಸುತ್ತಿದ್ದಾರೆ. ಜ್ವರ, ಶೀತ ಕೆಮ್ಮು ಮುಂತಾದವುಗಳಿಗೆ ಕಷಾಯದ ಮನೆಮದ್ದನ್ನೇ ಬಳಸುವುದು ರೂಢಿಯಲ್ಲಿದೆ. ಕಷಾಯವನ್ನು ನಿಯಮಿತವಾಗಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಆದರೆ ಕಷಾಯ ಮಾಡಲು ಬಳಸುವ ಸಾಮಗ್ರಿಗಳ ಪ್ರಮಾಣ ಹೆಚ್ಚು ಕಡಿಮೆ ಆದರೆ ಪ್ರಯೋಜನದ ಬದಲು ಅನಾರೋಗ್ಯ ಹೆಚ್ಚಾಗುತ್ತದೆ. ಕಷಾಯ ತಯಾರಿಸುವಾಗ ಕೆಲ ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಆಯುರ್ವೇದ ತಜ್ಞರ ಪ್ರಕಾರ, ಕಷಾಯ ತುಂಬಾ ದಪ್ಪವಾಗಿರಬಾರದು ಅಥವಾ ತೆಳುವಾಗಿರಬಾರದು. ಕಷಾಯವನ್ನು ಸೂಪ್‌ನಂತೆ ಮಾಡಿ ಕುಡಿಯಬೇಕು. ಕಷಾಯ ಮಾಡುವ ಸಾಮಗ್ರಿಗಳನ್ನು ಹಾಗೂ ನೀರನ್ನು ಅಗತ್ಯ ಪ್ರಮಾಣದಲ್ಲಿ ಹಾಕಬೇಕು. ನಂತರ ಚೆನ್ನಾಗಿ ಕುದಿಸಿ ನೀರಿನ ಪ್ರಮಾಣ ಅರ್ಧಕ್ಕೆ ಬಂದ ನಂತರ ಕಷಾಯ ಕುಡಿಯಬೇಕು. ಕಷಾಯಕ್ಕೆ ಸಕ್ಕರೆ ಬಳಸುವ ಬದಲು ಬೆಲ್ಲ ಬಳಸಬೇಕು.
ಕಷಾಯ ಮಾಡಲು ಕರಿಮೆಣಸು, ದಾಲ್ಚಿನಿ, ಅರಿಶಿನ, ಅಶ್ವಗಂಧ, ಅಮೃತ ಬಳ್ಳಿ ಮತ್ತು ಒಣ ಶುಂಠಿಯನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಈ ವಸ್ತುಗಳು ದೇಹದ ಉಷ್ಣತೆ ಹೆಚ್ಚಿಸುತ್ತವೆ. ಜೀರ್ಣಶಕ್ತಿ ಕಡಿಮೆ ಇರುವವರು ಹೆಚ್ಚು ಕಷಾಯವನ್ನು ಕುಡಿಯುವುದರಿಂದ ತೊಂದರೆಯಾಗುತ್ತದೆ. ಬಾಯಿ ಹುಣ್ಣು, ಅಸಿಡಿಟಿ ಮತ್ತು ಮೂತ್ರ ವಿಸರ್ಜನೆಯ ಸಮಸ್ಯೆಗಳು ಉಂಟಾಗಬಹುದು. ಅಂತಹ ಸಮಸ್ಯೆ ಇರುವವರು ಕಷಾಯದ ಸೇವನೆಯನ್ನು ಕಡಿಮೆ ಮಾಡಬೇಕು.