ಚಾಮರಾಜನಗರ: ಚಾಮರಾಜನಗರದ ಕೋವಿಡ್ ಆಸ್ಪತ್ರೆಯಲ್ಲಿ 2021ರ ಮೇ 2 ರಂದು ಸಕಾಲಕ್ಕೆ ಆಮ್ಲಜನಕ ಸಿಗದೇ ಮೃತಪಟ್ಟ 32 ಮಂದಿಯ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಘೋಷಿಸಿದ್ದಾರೆ.
ಚಾಮರಾಜನಗರ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಂತ್ರಸ್ತರ ಕುಟುಂಬದವರು ಫೆಬ್ರವರಿ 1ರಿಂದ ಜಿಲ್ಲೆಯಲ್ಲಿ ಕೆಲಸ ಮಾಡಬಹುದಾಗಿದೆ. ಸಂಬಂಧಿಸಿದವರು ಜಿಲ್ಲಾಧಿಕಾರಿ ಕಚೇರಿ ಸಂಪರ್ಕಿಸಬಹುದು. ಮುಂದಿನ ದಿನಗಳಲ್ಲಿ ಅವರಿಗೆ ಹೆಚ್ಚು ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.
ದುರಂತ ನಡೆದ ಸಂದರ್ಭದಲ್ಲಿ ಪಕ್ಷದ ಮುಖಂಡರು ಸಂತ್ರಸ್ತರ ಕುಟುಂಬ ಸದಸ್ಯರ ಭೇಟಿಯಾಗಿ ಧೈರ್ಯ ತುಂಬಿದ್ದರು. ಪಕ್ಷದಿಂದ ಪರಿಹಾರ ನೀಡಲಾಗಿತ್ತು. ಅಧಿಕಾರಕ್ಕೆ ಬಂದಲ್ಲಿ ಸರ್ಕಾರಿ ಕೆಲಸದ ಭರವಸೆ ನೀಡಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಸರ್ಕಾರಿ ಕೆಲಸದ ಭರವಸೆ ನೀಡಿದ್ದರು. ತಾತ್ಕಾಲಿಕವಾಗಿ ಹೊರಗುತ್ತಿಗೆ ಆಧಾರದಲ್ಲಿ ಜಿಲ್ಲಾಡಳಿತ ಉದ್ಯೋಗ ನೀಡಲಿದೆ. ಮುಂದಿನ ದಿನಗಳಲ್ಲಿ ಕಾಯಂ ಉದ್ಯೋಗ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಲಾಗುವುದು ಎಂದು ಹೇಳಿದ್ದಾರೆ.