ಬೆಂಗಳೂರು: ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ 4.8 ಕೋಟಿ ರೂಪಾಯಿಯನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಅವರ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಎಸ್‌ಎಸ್‌ಟಿ ಅಧಿಕಾರಿ ದಶರಥ ವಿ. ಕುಮಾರ್ ಅವರು ಚುನಾವಣೆ ಆಕ್ರಮದ ಬಗ್ಗೆ ದೂರು ನೀಡಿದ್ದರು. ಆರಂಭದಲ್ಲಿ ಗಂಭೀರವಲ್ಲದ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಎಫ್ಐಆರ್ ದಾಖಲಿಸಿ ಕೊಂಡು ತನಿಖೆ ನಡೆಸಲು ನಿರ್ದೇಶನ ನೀಡಿದೆ.
ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಂಚಲು ಸುಧಾಕರ್ ಅವರ ಆಪ್ತ ಮಾದಾವರದ ಗೋವಿಂದಪ್ಪ ಅವರ ಮನೆಯಲ್ಲಿ ಸಂಗ್ರಹಿಸಿದ್ದ 4.8 ಕೋಟಿ ರೂ.ಗಳನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಹಣ ವಾಪಸ್ ಕೊಡಿಸುವಂತೆ ಸುಧಾಕರ್ ಅವರು ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದರು ಎಂದು ಕೇಸು ದಾಖಲಾಗಿದೆ.
ಜಿಲ್ಲಾ ಮಾದರಿ ನೀತಿ ಸಂಹಿತೆ ಅಧಿಕಾರಿ ಮುನೀಶ್ ಮೌದ್ಗೀಲ್ ಮತ್ತು ಐಟಿ ಅಧಿಕಾರಿ ಆನಂದ್ ರಟ್ಕಲ್ ಅವರಿಗೆ ಸುಧಾಕರ್ ಕರೆ ಮಾಡಿ ಸಂದೇಶ ಕಳಿಸಿ, ಕರೆ ಮಾಡಿ, ಮಾದಾವರ ಗೋವಿಂದಪ್ಪ ಮನೆಯಲ್ಲಿ ಐಟಿ ಟೀಂ ಇದೆ. ದಯವಿಟ್ಟು ಸಹಾಯ ಮಾಡಿ, ನಿಮಗೆ ಚಿರಋಣಿ ಎಂದು ಹೇಳಿದ್ದರೆನ್ನಲಾಗಿದೆ.