ಬೆಂಗಳೂರು : ಕರ್ನಾಟಕ ಸರ್ಕಾರದ ನಿರ್ದೇಶನದಂತೆ, ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2024 (ಕೆಸೆಟ್- 2024) ಅನ್ನು 24ನೇ ನವೆಂಬರ್ 2024 (ಭಾನುವಾರ) ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲು ಯೋಜಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ. ಕೆಸೆಟ್-2024 ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಈ ಕೆಳಗಿನಂತಿದೆ.
1) ಅಧಿಸೂಚನೆ ಹೊರಡಿಸಲಾಗುವ ದಿನಾಂಕ 13.07.2024
2) ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ 22.07.2024
3) ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 22.08.2024
4) ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 26.08.2024
5) ಪರೀಕ್ಷಾ ದಿನಾಂಕ 24.11.2024
ಅಭ್ಯರ್ಥಿಗಳು ಕೆಸೆಟ್-2024ಕ್ಕೆ “Online” ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಯಾವುದೇ ಇತರ ನಮೂನೆಯಲ್ಲಿ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ. KEA ವೆಬ್ ಸೈಟ್ http://kea.kar.nic.in ಅನ್ನು ಪ್ರವೇಶಿಸುವ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಸಲ್ಲಿಸುವ ಮುನ್ನ ಈ ಅಧಿಸೂಚನೆಯನ್ನು ಗಮನವಿಟ್ಟು ಓದಿ ನಂತರ ಅರ್ಜಿಯನ್ನು ಭರ್ತಿಮಾಡಬೇಕು.
ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು, ಕರ್ನಾಟಕ ರಾಜ್ಯದ ಯಾವುದೇ ವಿಶ್ವವಿದ್ಯಾನಿಲಯ / ಪ್ರಥಮ ದರ್ಜೆ ಪದವಿ ಕಾಲೇಜು | ಉನ್ನತ ಶಿಕ್ಷಣ ಸಂಸ್ಥೆ (ಸರ್ಕಾರಿ, ಅನುದಾನಿತ ಮತ್ತು ಖಾಸಗಿ) ಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ ಹಾಗೂ ಆಯಾ ಸಂಸ್ಥೆಗಳ ನಿಯಮ ಮತ್ತು ಕಾಯ್ದೆಗಳಿಗೆ ಒಳಪಟ್ಟಿರುತ್ತಾರೆ.
ವಿಕಲಚೇತನ (PwD), ತೃತೀಯ ಲಿಂಗ, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಮತ್ತು ಇತರೆ ಹಿಂದುಳಿದ ವರ್ಗದ (ಪ್ರವರ್ಗ-I, IIA, IIB, IIIA, ಮತ್ತು IIIB) ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗದವರ ಪಟ್ಟಿಯಲ್ಲಿರುವಂತಿರಬೇಕು.
I) ಅರ್ಹತಾ ನಿಬಂಧನೆಗಳು
1) ಅಭ್ಯರ್ಥಿಗಳು ಯು.ಜಿ.ಸಿ ಯಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯ / ಉನ್ನತ ಶಿಕ್ಷಣ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಅಥವಾ ಸಮಾನವಾದ ಪರೀಕ್ಷೆಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇ.55% ರಷ್ಟು ಅಂಕಗಳನ್ನು (ಪೂರ್ಣಾಂಕಿತ ಗೊಳಿಸಿರಬಾರದು) ಪಡೆದಿರಬೇಕು. ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಇತರೆ ಹಿಂದುಳಿದ ಅಭ್ಯರ್ಥಿಗಳು (ಪ್ರವರ್ಗ-I, IIA, IIB, IIIA, IIIB), ವಿಕಲಚೇತನರು (PwD) ಮತ್ತು ತೃತೀಯ ಲಿಂಗ ಗುಂಪಿಗೆ ಸೇರಿದ ಅಭ್ಯರ್ಥಿಗಳು ಶೇ.50% ರಷ್ಟು (ಪೂರ್ಣಾಂಕಿತ ಗೊಳಿಸಿರಬಾರದು) ಅಂಕಗಳನ್ನು ಪಡೆದಿರಬೇಕು.
2) ಸ್ನಾತಕೋತ್ತರ ಪದವಿ ಪಡೆದವರು ಹಾಗೂ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ (ಪ್ರಥಮ ಮತ್ತು ದ್ವಿತೀಯ) ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕೆಸೆಟ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಆದರೆ, ಪ್ರಸ್ತುತ ವ್ಯಾಸಾಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಲು ತಾತ್ಕಾಲಿಕವಾಗಿ ಮಾತ್ರ ಪ್ರವೇಶ ನೀಡಲಾಗುವುದು. ಅವರು ಸ್ನಾತಕೋತ್ತರ ಪದವಿ ಅಥವಾ ಸಮಾನವಾದ ಪರೀಕ್ಷೆಯನ್ನು, ಸಾಮಾನ್ಯ ವರ್ಗದವರು ಶೇ.55% ರಷ್ಟು ಹಾಗೂ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಪ್ರವರ್ಗ-I, IIA, IIB, IIIA, ಮತ್ತು IIIB, ವಿಕಲಚೇತನರು (PwD) ಮತ್ತು ತೃತೀಯ ಲಿಂಗದ ಅಭ್ಯರ್ಥಿಗಳು, ಶೇ. 50% ರಷ್ಟು ಅಂಕ ಪಡೆದು, ಅರ್ಹತೆ ಹೊಂದಿ ಕೆಸೆಟ್ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ ದಿನಾಂಕದಿಂದ ಎರಡು ವರ್ಷದೊಳಗಾಗಿ ಅವರ ಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳನ್ನು ಸಲ್ಲಿಸಿದರೆ ಮಾತ್ರ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪ್ರಮಾಣ ಪತ್ರ ಪಡೆಯಬಹುದು. ಇಲ್ಲವಾದಲ್ಲಿ ಅಂತಹವರ ಅರ್ಹತೆಯನ್ನು ರದ್ದುಪಡಿಸಲಾಗುವುದು.