ಬಳ್ಳಾರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ಮುಂದುವರೆಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಇರುವವರೆಲ್ಲ ಮುಖ್ಯಮಂತ್ರಿ ಆಗುವವರೇ. ನಾನೂ ಸಿಎಂ, ನಾನೂ ಸಿಎಂ ಎಂದು 224 ಜನರೂ ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಅಧಿಕಾರ ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ನಲ್ಲಿಯೇ ಆರಂಭವಾಗಿರುವ ಚರ್ಚೆಗೆ ಸಂಬಂಧಿಸಿದಂತೆ ಮಾತನಾಡುತ್ತಾ, ಇನ್ನೂ ರಾಜಕಾರಣದಲ್ಲಿ ಕಣ್ಣು ಬಿಡದ ಪ್ರಿಯಾಂಕ್ ಖರ್ಗೆ ನಾನೂ ಸಿಎಂ ಅಂತಿದ್ದಾರೆ. ಪ್ರಿಯಾಂಕ್ ಖರ್ಗೆಯವರ ತಂದೆಯ ಹೆಸರು ಹೇಳಿದ್ದರೆ ಒಪ್ಪಿಕೊಳ್ಳುತ್ತಿದ್ದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಸಿಎಂ ಆಗಲು ಬಿಟ್ಟಿಲ್ಲ. ಇನ್ನು ಅವರ ಮಗ ಪ್ರಿಯಾಂಕ್ ಖರ್ಗೆ ಅವರನ್ನು ಬಿಡ್ತಾರಾ? ಎಂದು ಟಾಂಗ್ ನೀಡಿದರು.
ಸಚಿವ ಸತೀಶ್ ಜಾರಕಿಹೊಳಿ ಕೂಡ ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ಡಾ.ಪರಮೇಶ್ವರ್ ಮುಖ್ಯಮಂತ್ರಿ ಆಗಲಿ ಎಂದು ರಾಜಣ್ಣ ಹೇಳುತ್ತಿದ್ದಾರೆ. ಪರಮೇಶ್ವರ್ ಅವರು ದೇವರ ಅನುಗ್ರಹ ಇದ್ದರೆ ಸಿಎಂ ಆಗುತ್ತೇನೆ ಅಂತಿದ್ದಾರೆ. ಕಾಂಗ್ರೆಸ್ ನಲ್ಲಿ ಇರುವರೆಲ್ಲರೂ ಸಿಎಂ ರೇಸ್ ನಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.