ಬೆಂಗಳೂರು: ಕೇಂದ್ರ ಸಚಿವ ಅಮಿತ್ ಶಾ ಬುಲಾವ್ ಮೇರೆಗೆ ದೆಹಲಿಗೆ ತೆರಳಿದ್ದ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ನಿರಾಶರಾಗಿ ರಾಜ್ಯಕ್ಕೆ ವಾಪಾಸ್ ಆಗಿದ್ದಾರೆ.
ದೆಹಲಿಯಿಂದ ವಾಪಾಸ್ ಆಗಿರುವ ಈಶ್ವರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದ್ದು, ದೆಹಲಿಗೆ ತೆರಳಿದರೂ ಅಮಿತ್ ಶಾ ಭೇಟಿಗೆ ಅವಕಾಶ ನೀಡಿಲ್ಲ. ಭೇಟಿಯಾಗುವುದು ಬೇಡ ಎಂದು ಹೇಳಿದ್ದಾರೆ. ಹಾಗಾಗಿ ವಾಪಾಸ್ ಆಗಿದ್ದೇನೆ ಎಂದರು.
ಈ ಬಾರಿಯೂ ಅವರೇ ದೆಹಲಿಗೆ ಕರೆದರು. ಹಾಗಾಗಿ ಹಿರಿಯರು ಕರೆದಿದ್ದಾರೆ. ಹೋಗದಿದ್ದರೆ ಈಶ್ವರಪ್ಪಗೆ ಎಷ್ಟು ಸೊಕ್ಕು ಎಂಬಂತಾಗುತ್ತದೆ ಎಂದು ಹಿರಿಯರ ಮಾತಿಗೆ ಗೌರವಕೊಟ್ಟು ಹೋದೆ. ಆದರೆ ಅವರ ಭೇಟಿಗೆ ಅವಕಾಶ ನೀಡಿಲ್ಲ. ಅವರ ಕಚೇರಿಗೆ ಹೋದರೂ ಭೇಟಿಗೆ ಸಮಯ ಸಿಕ್ಕಿಲ್ಲ. ಬಹುಶಃ ಅವರಿಗೇ ಅರ್ಥವಾಗಿ ಭೇಟಿ ಮಾಡಿಲ್ಲ ಎನಿಸುತ್ತದೆ. ಶಿವಮೊಗ್ಗ ಕ್ಷೇತ್ರದಿಂದ ಯಾಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂಬುದನ್ನು ಅವರು ಕರೆ ಮಾಡಿದಾಗಲೂ ಹೇಳಿದ್ದೆ. ಈಗ ಭೇಟಿಯಾಗಿ ಮಾತನಾಡುವಾಗಲೂ ಅದೇ ಪ್ರಶ್ನೆಯನ್ನು ಕೇಳುತ್ತೇನೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಭೇಟಿಯಾಗದಿರುವುದು ಒಳ್ಳೆಯದೇ ಆಯಿತು. ಅಮಿತ್ ಶಾ ಭೇಟಿಯಾಗಿದ್ದರೆ ನನ್ನ ಸ್ಪರ್ಧೆಗೆ ಒಪ್ಪದಿದ್ದರೆ ನನಗೂ ಇಕ್ಕಟ್ಟಿಗೆ ಸಿಲುಕಿದಂತಾಗುತ್ತಿತ್ತು. ಈಗ ಅವರೇ ಭೇಟಿಗೆ ಅವಕಾಶ ಕೊಟ್ಟಿಲ್ಲ ಹಾಗಾಗಿ ನನ್ನ ನಿಲುವು ಸ್ಪಷ್ಟವಾಯಿತು ಎಂದಿದ್ದಾರೆ.
ಅಲ್ಲದೇ ಅಮಿತ್ ಶಾ ಅವರಿಗೂ ಅನಿಸಿರಬಹುದು. ಈಶ್ವರಪ್ಪ ಮಾಡುತ್ತಿರುವುದು ಸರಿಯಾಗಿದೆ ಎಂದು. ಹಾಗಾಗಿ ನನ್ನ ಸ್ಪರ್ಧೆ ಖಚಿತವಾಗಿದೆ. ಯಾವುದೇ ಕಾರಣಕ್ಕೂ ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.