ಶಿವಮೊಗ್ಗ: ಭಾರತ ಹಿಂದೂ ರಾಷ್ಟ್ರವಾದರೆ ಪಾಕಿಸ್ತಾನದ ರೀತಿ ಆಗುತ್ತದೆ ಎಂಬ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಯತೀಂದ್ರ ಹಾಗೂ ಸಿದ್ದರಾಮಯ್ಯ ಇಬ್ಬರೂ ಮುಸ್ಲೀಮರಾಗಿ ಪಾಕಿಸ್ತಾನಕ್ಕೆ ಹೊಗಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಸ್ವರಪ್ಪ, ಯತೀಂದ್ರ ಅವರದ್ದು ಹುಚ್ಚು ಹೇಳಿಕೆ. ವಿಶ್ವದಲ್ಲಿ ಹಿಂದೂ ರಾಷ್ಟ್ರವಾಗುವ ಶಕ್ತಿ ಇರುವುದು ಭಾರತಕ್ಕೆ ಮಾತ್ರ. ಭಾರತೀಯರು ಇಲ್ಲಿನ ಪ್ರತಿಯೊಂದು ಶ್ರದ್ಧಾ ಕೇಂದ್ರಗಳಿಗೆ ಗೌರವ ಕೊಟ್ಟು ಪೂಜಿಸುತ್ತಿರುವುದು ಇಲ್ಲಿನ ವಿಶೇಷ. ಭಾರತದ ಪ್ರತಿಯೊಬ್ಬರೂ ಭಾರತ ಹಿಂದೂ ರಾಷ್ಟ್ರವಾಗಬೇಕು ಎಂದು ಬಯಸುತ್ತಾರೆ. ಹೀಗಿರುವಾಗ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಪಾಕಿಸ್ತಾನದಲ್ಲಿರುವವರು ಧರ್ಮ ದ್ರೋಹಿಗಳು, ಅವರು ಮಸೀದಿಗಳಿಗೆ ಹೋಗಿ ಗುಂಡು ಹೊಡೆಯುತ್ತಾರೆ. ಭಾರತೀಯರು ದೇವಸ್ಥಾನಗಳಿಗೆ ಹೋಗಿ ಭಕ್ತಿಯಿಂದ ಪೂಜೆ ಮಾಡಿ ಒಳ್ಳೆಯದನ್ನು ಪ್ರಾರ್ಥಿಸುತ್ತಾರೆ. ಇದ್ಯಾವುದೂ ಯತೀಂದ್ರ ಸಿದ್ದರಾಮಯ್ಯಗೆ ಗೊತ್ತಿಲ್ಲ, ಹಿಂದೂ ಧರ್ಮದ ಬಗ್ಗೆಯೂ ಗೊತ್ತಿಲ್ಲ. ಸಿಎಂ ಮಗ ಎಂದು ಪ್ರಚಾರಕ್ಕಾಗಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯತೀಂದ್ರ ಹಾಗೂ ಸಿದ್ದರಾಮಯ್ಯನವರಿಗೆ ಮುಸ್ಲೀಮರ ಮೇಲಿರುವಷ್ಟು ಪ್ರೀತಿ, ಗೌರವ ಯಾರ ಮೇಲೂ ಇಲ್ಲ. ಇವರಿಗೆ ದೇಶದ ಬಗ್ಗೆ ಗೌರವವೂ ಇಲ್ಲ, ದೇಶಭಕ್ತಿಯೂ ಇಲ್ಲ. ಯತೀಂದ್ರ ಹಾಗೂ ಸಿದ್ದರಾಮಯ್ಯ ಇಬ್ಬರೂ ಮುಸಲ್ಮಾನರಾಗಿ ಪಾಕಿಸ್ತಾನಕ್ಕೆ ಹೋದರೆ ಒಳ್ಳೆಯದು ಎಂದು ವಾಗ್ದಾಳಿ ನಡೆಸಿದ್ದಾರೆ.