ಶಿವಮೊಗ್ಗ: ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಬಂಡಾಯ ಖಚಿತ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಕಾಂತೇಶ್ ಗೆ ಟಿಕೆಟ್ ಕೈತಪ್ಪಿದ್ದಕ್ಕೆ ಮತ್ತೆ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪ ಹಲವರಿಗೆ ಮೋಸ ಮಾಡಿದ್ದಾರೆ. ಇದರಿಂದ ಬಹಳ ಬೇಸರವಾಗಿದೆ. ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಪಕ್ಷ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದರು.
ಶಿವಮೊಗ್ಗಕ್ಕೆ ನಾಳೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ನಾಳೆ ಮೋದಿ ಕಾರ್ಯಕ್ರಕ್ಕೆ ನಾನು ಹೋಗುವುದಿಲ್ಲ. ಯಾರು ಏನೇ ಹೇಳಿದರು ನನ್ನ ನಿರ್ಧಾರ ಖಚಿತವಾಗಿದೆ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿದರು.
ನಾನು ಮೋದಿ ಪರ ಧ್ವನಿ ಎತ್ತುತ್ತೇನೆ. ಆದರೆ ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ. ಇಂದು ಅರಗ ಜ್ಞಾನೇಂದ್ರ ಹಾಗೂ ಕೆಲವರು ಮನೆಗೆ ಬಂದಿದ್ದರು. ಆದರೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ನನ್ನ ನಿರ್ಧಾರದಲ್ಲಿ ಯಾವ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದೇನೆ ಎಂದರು.
ನನ್ನ ಮಗನಿಗೆ ಮಾತ್ರವಲ್ಲ ಪಕ್ಷದಲ್ಲಿರುವ ಹಲವು ಹಿಂದೂತ್ವವಾದಿಗಳಿಗೂ ಮೋಸವಾಗಿದೆ. ಯಡಿಯೂರಪ್ಪ ಕುಟುಂಬದ ಹಿಡಿತದಲ್ಲಿ ಬಿಜೆಪಿ ಸಿಲುಕಿದೆ. ರಾಜ್ಯಾಧ್ಯಕ್ಷರು ಲಿಂಗಾಯಿತರೆ ಆಗಬೇಕು ಎಂಬುದಿದ್ದರೆ ಯತ್ನಾಳ್ ರನ್ನು ಮಾಡಬಹುದಿತ್ತು. ಯಾಕೆ ಮಾಡಿಲ್ಲ? ಲಿಂಗಾಯಿತರು ಬೆಳೆಯುವುದು ಇಷ್ಟವಿಲ್ಲ ಎಂದರೆ ಒಕ್ಕಲಿಗರನ್ನು ಮಾಡಬಹುದುತ್ತು. ಅದನ್ನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.