ಬೆಂಗಳೂರು: ಸುಪ್ರೀಂ ಕೋರ್ಟ್ ಸೂಚಿಸಿದ ಜಾಗದಲ್ಲಿ ರಾಮ ಮಂದಿರ ನಿರ್ಮಾಣ ಮಾಡಿಲ್ಲ ಎಂಬ ಸಚಿವ ಸಂತೋಷ್ ಲಾಡ್ ಹೇಳಿಕೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ ಬಳಿಕ ಕಾಂಗ್ರೆಸ್ ನಾಯಕರು ಏನೇನೋ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, 140 ಕೋಟಿ ಜನರನ್ನು ಒಗ್ಗೂಡಿಸುವ ಮಂದಿರ ಅದು. ಅದೊಂದು ರಾಷ್ಟ್ರೀಯ ಮಂದಿರ. ರಾಮ ಮಂದಿರದ ವಿಚಾರವಾಗಿ ಸಂತೋಷ್ ಲಾಡ್ ಹೇಳಿಕೆ ಸೂಕ್ತವಲ್ಲ ಎಂದು ಹೇಳಿದರು.
ಕಾಂಗ್ರೆಸ್ ನವರು ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರ ಹೆಸರು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಅವರಿಗೆ ಈವರೆಗೆ ಕಾಂಗ್ರೆಸ್ ನಿಂದ ನ್ಯಾಯ ಸಿಕ್ಕಿಲ್ಲ. ಮೋದಿಯವರು ಪ್ರಧಾನಿಯಾದ ಬಳಿಕ ಮೂರು ವರ್ಗಕ್ಕೂ ನ್ಯಾಯ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರು ಬಿಜೆಪಿಗೆ ಮತ ಹಾಕಲಿದ್ದಾರೆ ಎಂದಿದ್ದಾರೆ.