ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ.
ಲೋಕಸಭಾ ಕ್ಷೇತ್ರದಿಂದ ಈಶ್ವರಪ್ಪ ಹಿಂದೆ ಸರಿಯಲಿದ್ದಾರೆ, ನಾಮಪತ್ರ ವಾಪಾಸ್ ಪಡೆಯಬಹುದು ಎಂಬುದು ಬಿಜೆಪಿ ನಿರೀಕ್ಷೆಯಾಗಿತ್ತು. ಆದರೆ ಬಿಜೆಪಿ ನಾಯಕರಿಗೆ ಸೆಡ್ಡುಹೊಡೆದಿರುವ ಈಶ್ವರಪ್ಪ ನಾಮಪತ್ರ ಹಿಂಪಡೆದಿಲ್ಲ. ಇದರ ಬೆನ್ನಲ್ಲೇ ಬಿಜೆಪಿ ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದೆ.
ಈ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಬಿಜೆಪಿಯಿಂದ ನನ್ನ ಉಚ್ಛಾಟನೆ ಕೇವಲ ತಾತ್ಕಾಲಿಕ. ಇದರಿಂದ ನನಗೆ ಬೇಸರವಿಲ್ಲ. ಅವರೇ ಉಚ್ಛಾಟನೆ ಮಾಡಿದ್ದು ಒಳ್ಳೆಯದೇ ಆಯಿತು. ಈಗ ಜನರಿಗೆ ಒಂದು ಸ್ಪಷ್ಟನೆ ಬಂತು ಈಶ್ವರಪ್ಪ ಸ್ಪರ್ಧೆ ಖಚಿತ ಎಂಬುದು ಗೊತ್ತಾಯಿತು. ಇದರಿಂದ ಜನ ಇನ್ನಷ್ಟು ನನಗೆ ಬೆಂಬಲ ಕೊಡಲಿದ್ದಾರೆ ಎಂದರು.
ಬಿಜೆಪಿ ಅಪ್ಪ-ಮಕ್ಕಳ ಕೈಯಲ್ಲಿದೆ. ಬಿಜೆಪಿಯನ್ನು ಶುದ್ಧೀಕರಣ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನಾನು ಹೆಜ್ಜೆ ಇಟ್ಟಿದ್ದೇನೆ ಎಂದು ಹೇಳಿದರು.