ಶಿವಮೊಗ್ಗ: ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ಮೇರೆಗೆ ದೆಹಲಿಗೆ ಹೋದರೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಅಮಿತ್ ಶಾ ಭೇಟಿಗೆ ಅವಕಾಶ ನೀಡಿಲ್ಲ. ನಿರಾಶರಾಗಿ ವಾಪಾಸ್ ಆದರೂ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿರುವ ಈಶ್ವರಪ್ಪ ಅಮಿತ್ ಶಾ ಭೇಟಿಯಾಗದೇ ಇದ್ದದ್ದೇ ಒಂದು ರೀತಿ ಒಳ್ಳೆಯದಾಯಿತು. ಪರೋಕ್ಷವಾಗಿ ಗೆದ್ದು ಬಾ ಎಂದು ಹಾರೈಸಿದಂತಯಾತು ಎಂದು ಹೇಳಿದ್ದಾರೆ.
ದೆಹಲಿಯಿಂದ ವಾಪಾಸ್ ಆದ ಬಳಿಕ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಈಶ್ವರಪ್ಪ, ಅಮಿತ್ ಶಾ ದೆಹಲಿಗೆ ಬರಲು ಹೇಳಿದ್ದರು. ದೊಡ್ಡವರು ಕರೆದಿದ್ದಾರೆ ಎಂದು ಗೌರವ ಕೊಟ್ಟು ಹೋದೆ. ರಾಜೇಶ್ ಜಿ ಅವರ ಮನೆಗೆ ತೆರಳಲು ಹೇಳಿದರು. ನಾನು ದೆಹಲಿ ತಲುಪಿ ಅಮಿತ್ ಶಾ ಮನೆಗೆ ಫೋನ್ ಮಾಡಿದೆ. ಫೋನ್ ನಲ್ಲಿ ಭೇಟಿ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಭೇಟಿಗೆ ಅವಕಾಶ ನೀಡಿಲ್ಲ. ನನ್ನ ಎಲ್ಲಾ ಪ್ರಶ್ನೆಗಳಿಗೆ ಅವರ ಬಳಿ ಉತ್ತರವಿಲ್ಲ. ಹಾಗಾಗಿ ಭೇಟಿಯಾಗದೇ ಸ್ಪರ್ಧೆ ಮಾಡಲು ಸೂಚನೆ ಕೊಟ್ಟಿದ್ದಾರೆ. ನಾನು ಸ್ಪರ್ಧಿಸಿ ಗೆದ್ದು ದೆಹಲಿಗೆ ತೆರಳಿ ಮೋದಿ ಪರ ಕೈ ಎತ್ತುತ್ತೇನೆ ಎಂದರು.
ನನ್ನನ್ನು ಭೇಟಿಯಾಗದೇ ಅಮಿತ್ ಶಾ ತೆಗೆದುಕೊಂಡ ತೀರ್ಮಾನ ರಾಜಕೀಯ ಚಾಣಾಕ್ಷನ ತೀರ್ಮಾನ. ನಾನು ಸ್ವಾಗತ ಮಾಡುತ್ತೇನೆ. ಈ ಮೂಲಕ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಸೂಚನೆ ಸಿಕ್ಕಂತಾಗಿದೆ. ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮೋದಿ ಫೋಟೋ ಬಳಕೆ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಆಕ್ಷೇಪ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಮೋದಿ ಅವರಪ್ಪನ ಮನೆ ಆಸ್ತಿ ಅಲ್ಲ, ನನ್ನ ಹೃದಯದಲ್ಲಿ ಮೋದಿ ಇದ್ದಾರೆ. ಆದ್ರೆ ಅಪ್ಪ-ಮಕ್ಕಳ ಹೃದಯದಲ್ಲಿ ಯಾರಿದ್ದಾರೆ ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ನಾನು ಅದನ್ನು ಮತ್ತೊಮ್ಮೆ ಪುನರುಚ್ಛರಿಸಲ್ಲ ಎಂದು ಕಿಡಿಕಾರಿದರು.
ಇನ್ನು ಬಿ.ವೈ.ವಿಜಯೇಂದ್ರ ಅನಗತ್ಯವಾಗಿ ರಾಜ್ಯದ ಜನರಲ್ಲಿ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ. ಅವರಿಗೆ ಸೋಲಿನ ಭೀತಿ ಎದುರಾಗಿದೆ. ಗೊಂದಲ ಸೃಷ್ಠಿಸುವ ಹೇಳಿಕೆ ನೀಡಿದರೆ ವಿಜಯೇಂದ್ರಗೆ ಬೇರೆ ಭಾಷೆಯಲ್ಲಿಯೇ ಉತ್ತರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.