ಶಿವಮೊಗ್ಗ: ರಾಜ್ಯದಲ್ಲಿ ಪ್ರತಿಪಕ್ಷ ಇಲ್ಲ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರು ತಮ್ಮಲ್ಲಿರುವ ಗೊಂದಲ ಸರಿಪಡಿಸಿಕೊಳ್ಳಲಿ. ಬಳಿಕ ರಾಜ್ಯದಲ್ಲಿ ವಿರೋಧ ಪಕ್ಷ ಇದೆಯೇ ಎಂಬುದನ್ನು ನೋಡೋಣ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಕ್ರಮಣದ ನಂತರ ಸಿಡಿ ಬ್ಲಾಸ್ಟ್ ಆಗುತ್ತದೆ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಇಂತಹ ಹೇಳಿಕೆಗಳಿಂದ ಬೇಸರವಾಗಿದೆ. ಕೂಡಲೇ ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಬೇರೆ ಪಕ್ಷದಿಂದ ಬಂದವರಿಗೆ ಸ್ಥಾನಮಾನ ಅನಿವಾರ್ಯ. ಅವರು ಬರದೆ ಇದ್ದರೆ ಯಾರೂ ಮಂತ್ರಿಯಾಗಲು ಸಾಧ್ಯವಿರಲಿಲ್ಲ. ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗಿತ್ತು ಎಂದು ತಿಳಿಸಿದ್ದಾರೆ.
ಸಂಪುಟ ವಿಸ್ತರಣೆ ನಂತರ ಕೆಲವು ಶಾಸಕರು ಅಸಮಾಧಾನಗೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಶಾಸಕರು ತಮಗೆ ಆದ ಅನ್ಯಾಯ ಹೇಳಬೇಕಾದಲ್ಲಿ ಹೇಳಲಿ. ಅವರಿಗೆ ಅನ್ಯಾಯ ಆಗಿಲ್ಲ ಎಂದು ನಾನು ಹೇಳುವುದಿಲ್ಲ. ಅನ್ಯಾಯ ಆಗಿರುವುದನ್ನು ಬೀದಿಯಲ್ಲಿ ಸರಿಪಡಿಸಲು ಆಗುವುದಿಲ್ಲ. ಪಕ್ಷದ ಚೌಕಟ್ಟಿನಲ್ಲಿ ಅವರ ಸಮಸ್ಯೆಗಳನ್ನು ಹೇಳಬೇಕು. ಇದು ನಮ್ಮ ಪದ್ಧತಿ. ಇದನ್ನು ಮೀರಿದರೆ ಅವರು ವೈಯಕ್ತಿಕವಾಗಿ ಅನುಭವಿಸುತ್ತಾರೆ ಎಂದು ಹೇಳಿದ್ದಾರೆ.