ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಪುತ್ರ ಕಾಂತೇಶ್ ಗೆ ಹಾವೇರಿ ಬಿಜೆಪಿ ಟಿಕೆಟ್ ಸಿಗದ ಕಾರಣಕ್ಕೆ ಪಕ್ಷದ ವಿರುದ್ಧ ಸಿಡಿದೆದ್ದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಬಿಜೆಪಿ ನಾಯಕರ ಮನವೊಲಿಕೆಯ ಮಾತಿಗೂ ಬಗ್ಗದೇ ಸ್ಪರ್ಧೆಯನ್ನು ಖಚಿತಪಡಿಡಿಸಿರುವ ಈಶ್ವರಪ್ಪ ನಾಮಪತ್ರ ಸಲ್ಲಿಕೆಗೂ ಮುಹೂರ್ತ ನಿಗದಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಬೆಂಬಲಿಗರ ಸಮಾವೇಶದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಹರಿ-ಹರ-ಬ್ರಹ್ಮ ಬಂದರೂ ನಾನು ಚುನಾವಣೆಗೆ ಸ್ಪರ್ಧಿಸುವುದು ನಿಶ್ಚಿತ. ಯಾರು ಏನೇ ಹೇಳಿದರೂ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
ಏಪ್ರಿಲ್ 12ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. 25,000 ಜನರೊಂದಿಗೆ ಬಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ಘೋಷಿಸಿದ್ದಾರೆ.
ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರಗೆ ಸೋಲಿನ ಭೀತಿ ಆರಂಭವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರ ಗೆಲುವಿಗಾಗಿ ಶಿಕಾರಿಪುರದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದರು. ಹೀಗಾಗಿ ಕಾಂಗ್ರೆಸ್ ನಿಂದ ಡಮ್ಮಿ ಅಭ್ಯರ್ಥಿ ಹಾಕಿದ್ದರು. ಅದರಂತೆ ಹೊಂದಾಣಿಕೆ ಯಶಸ್ವಿಯಾಗಿತ್ತು. ಈಗ ಲೋಕಸಭೆಗೂ ಸಚಿವ ಮಧು ಬಂಗಾರಪ್ಪ ಜೊತೆಗೂ ಹೊಂದಾಣಿಕೆ ಮಾಡಿಕೊಂಡಿದ್ದು, ಹಾಗಾಗಿ ಆ ಪಕ್ಷದಿಂದ ಡಮ್ಮಿ ಅಭ್ಯರ್ಥಿ ಹಾಕಲಾಗಿದೆ. ಆದರೆ ಈ ಬಾರಿ ಹೊಂದಾಣಿಕೆ ರಾಜಕೀಯ ಯಶಸ್ವಿಯಾಗಲ್ಲ. ನಾನು 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ಹೇಳಿದ್ದಾರೆ.