ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಹಲವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪುತ್ರ ಕಾಂತೇಶ್ ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಮಿಸ್ ಆಗಿದ್ದಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಸಿಡಿದೆದ್ದಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಲೋಕಸಭಾ ಟಿಕೆಟ್ ವಿಚಾರವಾಗಿ ಯಡಿಯೂರಪ್ಪ ಹಾಗೂ ಅವರ ಮಕ್ಕಳಿಂದ ನಮಗೆ ಅನ್ಯಾಯವಾಗಿದೆ. ಕಾಂತೇಶ್ ಗೆ ಟಿಕೆಟ್ ಕೊಡದಂತೆ ಮಾಡಿದ್ದೇ ಮಾಜಿ ಸಿಎಂ ಯಡಿಯೂರಪ್ಪ ಎಂದು ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ.
ಹಾವೇರಿ ಕ್ಷೇತ್ರದಲ್ಲಿ ಕಾಂತೇಶ್ ಗೆ ಟಿಕೆಟ್ ಕೊಟ್ಟರೆ ಗೆಲ್ಲುತ್ತಾರೆ ಎಂದು ಯಡಿಯೂರಪ್ಪನವರೇ ಹೇಳಿದ್ದರು. ಹಾವೇರಿ ಕ್ಷೇತ್ರದಲ್ಲಿ ನಾನೇ ಓಡಾಡಿ ಗೆಲ್ಲಿಸುವುದಾಗಿ ಭರವಸೆಯನ್ನೂ ಕೊಟ್ಟಿದ್ದರು. ಯಡಿಯೂರಪ್ಪ ಮಾತು ನಂಬಿ ಕಾಂತೇಶ್ ವರ್ಷಾನುಗಟ್ಟಲೆ ಓಡಾಡಿದ್ದಾರೆ. ಆದರೆ ಕೊನೆಗೂ ಟಿಕೆಟ್ ಕೊಡದೇ ಮೋಸ ಮಾಡಿದರು. ಕಾಂತೇಶ್ ಗೆ ಟಿಕೆಟ್ ತಪ್ಪಲು ಯಡಿಯೂರಪ್ಪನವರೇ ಕಾರಣ ಎಂದು ಕಿಡಿಕಾರಿದ್ದಾರೆ.
ಈಗ ಕಾಂತೇಶ್ ಗೆ ಎಂ ಎಲ್ ಸಿ ಮಾಡುವುದಾಗಿ ಹೇಳುತ್ತಿದ್ದಾರೆ. ಎಂ ಎಲ್ ಸಿ ಮಾಡುವ ಭರವಸೆ ಕೇವಲ ಮೂಗಿಗೆ ತುಪ್ಪಸವರುವ ಕೆಲಸವಷ್ಟೇ. ಶೋಭಾಗೆ ಟಿಕೆಟ್ ಕೇಳಿದಷ್ಟು ನನ್ನ ಮಗನಿಗೆ ಯಾಕೆ ಕೇಳಿಲ್ಲ? ಬಿಎಸ್ ವೈ ಈವರೆಗೆ ನನ್ನ ಜೊತೆ ಮಾತನಾಡಿಯೂ ಇಲ್ಲ. ಯಡಿಯೂರಪ್ಪ ಮಾತು ಕೇಳಿ ನನ್ನ ಮಗ ಮೋಸ ಹೋದ. ಲೋಕಸಭೆ ಟಿಕೆಟ್ ನೀಡದೇ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.