ಬೆಂಗಳೂರು: ಗ್ರಾಮೀಣ ಕುಟುಂಬಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಸಿಹಿಸುದ್ದಿ ನೀಡಿದ್ದಾರೆ.
ಮನೆಮನೆಗೆ ಗಂಗೆ ಯೋಜನೆಯಡಿ ಇನ್ನು ಮೂರು ವರ್ಷದಲ್ಲಿ ರಾಜ್ಯದ 91.19 ಲಕ್ಷ ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಜಲ ಜೀವನ ಮಿಷನ್ ಯೋಜನೆಯನ್ನು ರಾಜ್ಯದಲ್ಲಿ ಮನೆಮನೆಗೆ ಗಂಗೆ ಹೆಸರಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿರುವ ಎಲ್ಲ ಕುಟುಂಬದವರಿಗೆ ನಲ್ಲಿ ನೀರಿನ ಸಂಪರ್ಕ ವ್ಯವಸ್ಥೆ ಮಾಡಲಾಗುವುದು. ರಾಜ್ಯದಲ್ಲಿ ಈಗಾಗಲೇ 24.72 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಉಳಿದ ಕುಟುಂಬಗಳಿಗೂ ಶೀಘ್ರವೇ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ಪ್ರತಿ ಗ್ರಾಮ ಪಂಚಾಯಿತಿ ಕಟ್ಟಡಗಳಿಗೆ ಸೌರಶಕ್ತಿ ಘಟಕ ಅಳವಡಿಸಲು ಯೋಜನೆ ರೂಪಿಸಲಾಗಿದೆ. ರಾಜ್ಯದ 6000 ಗ್ರಾಮ ಪಂಚಾಯಿತಿ ಕಟ್ಟಡಗಳಿಗೆ ಸೌರಶಕ್ತಿ ವ್ಯವಸ್ಥೆಗೆ 300 ಕೋಟಿ ರೂಪಾಯಿ ವೆಚ್ಚವಾಗಲಿದೆ. ಪ್ರತಿ ತಿಂಗಳು ಗ್ರಾಮಪಂಚಾಯಿತಿಗಳಿಗೆ ವಿದ್ಯುತ್ ಶುಲ್ಕ ಉಳಿತಾಯವಾಗಲಿದೆ. ಹೆಚ್ಚುವರಿ ವಿದ್ಯುತ್ ಗ್ರಿಡ್ ಗೆ ಕಳುಹಿಸುವುದರಿಂದ ಪಂಚಾಯಿತಿಗೆ ಆದಾಯ ಸಿಗುತ್ತದೆ ಎಂದು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ನೂತನ ಸದಸ್ಯರಿಗೆ ಸಾಮರ್ಥ್ಯ ಅಭಿವೃದ್ಧಿ ಮತ್ತು ಮುಖಾಮುಖಿ ತರಬೇತಿ ನೀಡಲು ಕಾರ್ಯಾಗಾರ ಆಯೋಜಿಸಲಾಗುವುದು. 900 ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದ್ದು, ಪಂಚಾಯಿತಿ ಸದಸ್ಯರಿಗೆ ತರಬೇತಿ ನೀಡಲಾಗುವುದು. ಪಂಚಾಯಿತಿ ವ್ಯವಸ್ಥೆಯ ರಚನೆ, ಸದಸ್ಯರ ಜವಾಬ್ದಾರಿ, ಕರ್ತವ್ಯ ಮೊದಲಾದ ವಿಷಯಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.