ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಮಕ್ಕಳ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.
ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ನಡೆಸಿರುವ ಕೆ.ಎಸ್.ಈಶ್ವರಪ್ಪ, ಚುನಾವಣಾ ಅಖಾಡದಿಂದ ಹಿಂದೆ ಸರಿಯುವ ಪ್ರಶ್ನೆಯೆ ಇಲ್ಲ. ದೇವರಾಣೆಗೂ ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದಿದ್ದಾರೆ. ಅಪ್ಪಿತಪ್ಪಿಯೂ ಬಿಜೆಪಿ ಅಥವಾ ಕಮಲಕ್ಕೆ ವೋಟ್ ಹಾಕಬೇಡಿ. ನನ್ನ ಚಿಹ್ನೆ ಬಗ್ಗೆ ಏಪ್ರಿಲ್ 19ರಂದು ತಿಳಿಯಲಿದೆ. ತಪ್ಪಿಯೂ ಬಿಜೆಪಿಗೆ ಮತಕೊಡಬೇಡಿ ಎಂದಿದ್ದಾರೆ.
ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಪುತ್ರರದ್ದೇ ದರ್ಬಾರ್ ಆಗಿದೆ. ಏಪ್ರಿಲ್ 19ರಿಂದ ರಾವಣನ ಸಂಹಾರಕ್ಕೆ ಹೆಜ್ಜೆ ಇಡುತ್ತೇನೆ. ಬಿಜೆಪಿಯವರು ಎಲ್ಲರಿಗೂ ಮೋಸ ಮಾಡಿದ್ದಾರೆ. ನನ್ನ ಮಗ ಕಾಂತೇಶ್ ಗೆ ಹಾವೇರಿಯಿಂದ ಟಿಕೆಟ್ ಕೊಡಿದ್ಸುತ್ತೇನೆ. ಆತನ ಪರ ಪ್ರಚಾರವನ್ನೂ ಮಾಡುತ್ತೇನೆ ಎಂದ ಯಡಿಯೂರಪ್ಪ ಮೋಸ ಮಾಡಿದರು. ಕೊನೇ ಕ್ಷಣದಲ್ಲಿ ಟಿಕೆಟ್ ವಂಚಿಸಿದರು. ಯಡಿಯೂರಪ್ಪನವರೇ ನಿಮ್ಮ ಒಬ್ಬ ಮಗ ಎಂಪಿ, ಇನ್ನೊಬ್ಬ ಮಗ ರಾಜ್ಯಾಧ್ಯಕ್ಷ. ಎಲ್ಲಾ ಅಧಿಕಾರಳು ನಿಮ್ಮ ಕುಟುಂಬಕ್ಕೆ ಮಾತ್ರವೇ? ನನಗೆ ಮಂತ್ರಿ ಸ್ಥಾನವಿಲ್ಲ ಎಂದು ಹೇಳಿದಾಗ ಸುಮ್ಮನಾದೆ. ಕಾಂತೇಶ್ ಗೆ ಟಿಕೆಟ್ ಕೊಡುವುದಾಗಿ ಭರವಸೆ ನೀಡಿದ್ದರಿ. ಆದರೆ ಈಗ ಮೋಸ ಮಾಡಿದ್ದೀರಿ. ಯಡಿಯೂರಪ್ಪ ನಾನು ಹಾಗೆ ಹೇಳಿಯೇ ಇಲ್ಲ ಎಂದು ಪ್ರಮಾಣ ಮಾಡಲಿಎಂದು ಸವಾಲು ಹಾಕಿದರು.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ವಿಜಯೇಂದ್ರ ಗೆದ್ದಿದ್ದಾರೆ. 4 ಪಟ್ಟು ಹಣ ಖರ್ಚು ಮಾಡಿ ವಿಜಯೇಂದ್ರನನ್ನು ಗೆಲ್ಲಿಸಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗಲೂ ನನು ಬಿಜೆಪಿ ಬಿಟ್ಟು ಹೋಗಿಲ್ಲ. ನನ್ನ ರಕ್ತದ ಕಣ ಕಣದಲ್ಲಿಯೂ ಬಿಜೆಪಿಯೇ ಇದೆ. ಸಾಯುವವರೆಗೂ ನರೇಂದ್ರ ಮೋದಿ ಪರವಾಗಿಯೇ ನಾನಿರುತ್ತೇನೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೋದಿಗೆ ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.