ಚಿತ್ರದುರ್ಗ: ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ಮತ್ತು ಶಾಸಕರಾದ ಚಂದ್ರಪ್ಪ ಹಾಗೂ ಗೂಳಿಹಟ್ಟಿ ಶೇಖರ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ವೈದ್ಯನನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ಮೂಲದ ಡಾ. ತಿಪ್ಪೇರುದ್ರಸ್ವಾಮಿ ಬಂಧಿತ ಆರೋಪಿ ಎಂದು ಹೇಳಲಾಗಿದೆ. ಎಂಬಿಬಿಎಸ್, ಎಂಡಿ ಪದವೀಧರನಾದ ತಿಪ್ಪೇರುದ್ರಸ್ವಾಮಿ ವೈದ್ಯನಾಗಿಯೂ ಕಾರ್ಯನಿರ್ವಹಿಸುತ್ತಿದ್ದು, KSP ಆಪ್ ಮೂಲಕ ಎಸ್.ಪಿ. ಕಚೇರಿಗೆ ಬೆದರಿಕೆ ಸಂದೇಶ ಕಳುಹಿಸಿದ್ದ. ಸ್ವಾಮೀಜಿಗಳು ಮತ್ತು ಶಾಸಕರಿಗೆ ಬೆದರಿಕೆ ಪತ್ರ ರವಾನಿಸಿದ್ದ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ಪರಶುರಾಮ್ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.