ಹಾಸನ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಕೆಲ ಶಾಸಕರು ಕಾಂಗ್ರೆಸ್ ಸೇರ್ಪಡೆಯಗಾಲಿದ್ದಾರೆ ಎಂಬ ಚರ್ಚೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಕೆ.ಎನ್.ರಾಜಣ್ಣ, ಬೇರೆ ಪಕ್ಷದಿಂದ ಕಾಂಗ್ರೆಸ್ ಗೆ ಅಥವಾ ಕಾಂಗ್ರೆಸ್ ನಿಂದ ಬೇರೆ ಪಕ್ಷಗಳಿಗೆ ಯಾರೂ ಹೋಗಲ್ಲ ಎಂದು ನಾನು ಹೇಳಲ್ಲ. ರಾಜಕೀಯ ನಿಂತ ನೀರಲ್ಲ. ಇದು ಸರ್ವೇ ಸಾಮಾನ್ಯ ಎಂದು ತಿಳಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಸಚಿವ ರಾಜಣ್ಣ, ಯಾರು ಬರುತ್ತಾರೆ, ಯಾರು ಹೋಗುತ್ತಾರೆ ಎನ್ನಲು ಸಾಧ್ಯವಿಲ್ಲ. ರಾಜಕೀಯ ದೃಢೀಕರಣ ಎನ್ನುವುದು ಅವರ ರಾಜಕೀಯ ಭವಿಷ್ಯದ ಆಧಾರದಲ್ಲಿ ಇರುತ್ತದೆ ಎಂದರು.
ಹೈಕಮಾಂಡ್ ಗೆ ಸಚಿವ ರಾಜಣ್ಣ ಕೇರ್ ಮಾಡಲ್ಲ ಎಂಬ ಬಿ.ಶಿವರಾಮ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಯಾವುದೋ ಮುಖಂಡರನ್ನು ಮೆಚ್ಚಿಸುವ ನಡವಳಿಕೆ ನನಗೆ ಬೇಕಿಲ್ಲ. ನನ್ನ ನಡವಳಿಕೆಯನ್ನು ಜನರು ಮೆಚ್ಚಬೇಕು. ನಾನು ಯಾರಿಗೂ ಗುಲಾಮ ಅಲ್ಲ, ನನಗೆ ನಾನೇ ಹೈಕಮಾಂಡ್. ಯಾರಿಗೂ ಹೆದರುವ ಅಗತ್ಯವಿಲ್ಲ. ನಾನು ಹೈಕಮಾಂಡ್ ಗೆ ನಿಷ್ಠೆ ಹೊಂದಿದ್ದೇನೆ. ಆದರೆ ಗುಲಾಮ ಅಲ್ಲ ಎಂದು ಹೇಳಿದರು.
ಇನ್ನು ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಮಿಷನ್ ಆರೋಪ ಮಾಡಿರುವ ಬಗ್ಗೆ, ಕಮಿಷನ್ ಯಾರು ಕೇಳ್ತಿದ್ದಾರೆ ಅಂತ ಅವರು ದೂರು ನೀಡಬೇಕು. ಯಾವ ಅಧಿಕಾರಿ ಎಷ್ಟು ಕಮಿಷನ್ ಕೇಳುತ್ತಿದ್ದಾರೆ ಎಂದು ದೂರು ನೀಡಲಿ. ಕೆಂಪಣ್ಣ ಬಗ್ಗೆ ನನಗೆ ಗೌರವವಿದೆ. ಅವರು ನಿಜ ಹೇಳುತ್ತಾರೆ ಎಂದು ಕೊಳ್ಳುತ್ತೇನೆ ಎಂದು ಹೇಳಿದರು.