ನವದೆಹಲಿ: ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ನಂತರ ಮಂಗಳವಾರ ರಾತ್ರಿ ಭಾರತ್ ರಾಷ್ಟ್ರ ಸಮಿತಿ ನಾಯಕಿ ಕೆ. ಕವಿತಾ ಅವರು ತಿಹಾರ್ ಜೈಲಿನಿಂದ ಹೊರ ಬಂದಿದ್ದಾರೆ.
ಈ ವರ್ಷದ ಮಾರ್ಚ್‌ನಲ್ಲಿ ಬಂಧಿತರಾಗಿದ್ದ ಕವಿತಾ ಅವರನ್ನು ತಿಹಾರ್‌ನ ಜೈಲು ಸಂಖ್ಯೆ 6 ರಿಂದ ಬಿಡುಗಡೆ ಮಾಡಲಾಯಿತು. ಅಲ್ಲಿ ಅವರು ಸುಮಾರು ಐದು ತಿಂಗಳ ಕಾಲ ಇದ್ದರು. ಅವರನ್ನು ಸ್ವಾಗತಿಸಲು ಜೈಲಿನ ಹೊರಗೆ ಜಮಾಯಿಸಿದ ಬಿಆರ್‌ಎಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಜೈಲು ಸಂಕೀರ್ಣದಿಂದ ನಿರ್ಗಮಿಸುತ್ತಿದ್ದಂತೆ ಡೋಲು ಬಾರಿಸುತ್ತಾ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕವಿತಾ ಅವರ ಸಹೋದರ ಬಿಆರ್‌ಎಸ್‌ನ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಉಪಸ್ಥಿತರಿದ್ದರು.
ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ 46 ವರ್ಷದ ಕವಿತಾ ಅವರನ್ನು ಜಾರಿ ನಿರ್ದೇಶನಾಲಯವು ಮಾರ್ಚ್ 15 ರಂದು ಹೈದರಾಬಾದ್‌ನ ಬಂಜಾರಾ ಹಿಲ್ಸ್ ನಿವಾಸದಿಂದ ಬಂಧಿಸಿತ್ತು. ಸಿಬಿಐ ಏಪ್ರಿಲ್ 11 ರಂದು ತಿಹಾರ್ ಜೈಲಿನಿಂದ ಬಂಧಿಸಿತ್ತು.
ತಿಹಾರ್ ಜೈಲಿನಿಂದ ಹೊರಬಂದ ಕವಿತಾ, ನಾನು ರಾಜಕೀಯ ಕಾರಣಗಳಿಗಾಗಿ ಜೈಲು ಪಾಲಾಗಿದ್ದೇನೆ ಎಂದು ಇಡೀ ದೇಶಕ್ಕೆ ತಿಳಿದಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಸುಮಾರು 5 ತಿಂಗಳ ನಂತರ ನನ್ನ ಮಗ, ಸಹೋದರ ಮತ್ತು ಪತಿಯನ್ನು ಭೇಟಿಯಾದ ನಂತರ ನಾನು ಭಾವೋದ್ವೇಗಕ್ಕೆ ಒಳಗಾಗಿದ್ದೇನೆ. ಈ ಪರಿಸ್ಥಿತಿಗೆ ರಾಜಕೀಯವೇ ಕಾರಣ. ನನ್ನನ್ನು ಜೈಲಿಗೆ ಹಾಕಲಾಗಿದೆ. ನಾವು ಹೋರಾಟಗಾರರು, ಕಾನೂನು ಮತ್ತು ರಾಜಕೀಯವಾಗಿ ಹೋರಾಡುತ್ತೇವೆ ಎಂದು ಹೇಳಿದ್ದಾರೆ.