ಉಡುಪಿ: ರಾಜ್ಯದ ಸುಮಾರು 25 ವಿವಿಧ ಜಾತಿಗಳ ಮೀಸಲಾತಿಗೆ ಸಂಬಂಧಿಸಿದಂತೆ ವರದಿಗಳನ್ನು ಸಿದ್ಧಪಡಿಸಲಾಗಿದ್ದು, ಈ ತಿಂಗಳೊಳಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, 17 ಜಾತಿಗಳ ಬಗ್ಗೆ ವರದಿಗಳನ್ನು ರಚಿಸಿ ಮುದ್ರಿಸಲಾಗಿದೆ. ಇನ್ನು 8 ಜಾತಿಗಳ ವರದಿಗಳು ಸಿದ್ಧವಾಗಿದ್ದು, ತಿಂಗಳೊಳಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು. ಜಾತಿಯೇ ಇಲ್ಲದ ಅನಾಥ ಮಕ್ಕಳಿಗೂ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡಲು ಶಿಫಾರಸು ಮಾಡುವ ವರದಿ ಕೂಡ ಇದರಲ್ಲಿ ಸೇರಿದೆ ಎಂದು ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಡುಬಿ ಜಾತಿಯವರು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮನವಿ ಮಾಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡ ಮೀಸಲಾತಿಗೆ ಸೇರಿಸುವುದು ಹಿಂದುಳಿದ ವರ್ಗದ ವ್ಯಾಪ್ತಿಗೆ ಬರುವುದಿಲ್ಲ. ಅಧಿಸೂಚಿತ ಬುಡಕಟ್ಟು ಎಂದು ಗುರುತಿಸುವ ಅಧಿಕಾರ ಹಿಂದುಳಿದ ವರ್ಗಗಳ ಆಯೋಗಕ್ಕೆ ಇದೆ. ಕುಡುಬಿ ಜಾತಿಯವರನ್ನು ಅಧಿಸೂಚಿತ ಬುಡಕಟ್ಟುಗೆ ಸೇರಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.