ಬೆಂಗಳೂರು: ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿರುವ ಕೆಲ ಶಾಸಕರು ಮತ್ತೆ ಮರಳಿ ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ ಎಂಬ ಮಾತು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು, ಈ ಬೆಳವಣಿಗೆ ಬೆನ್ನಲ್ಲೇ ಶಾಸಕ ಕೆ.ಗೋಪಾಲಯ್ಯ, ಎಸ್.ಟಿ.ಸೋಮಶೇಖರ್ ಸೇರಿದಂತೆ ಕೆಲ ನಾಯಕರು ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದನ್ನು ನಿರಾಕರಿಸಿರುವ ಬಿಜೆಪಿ ಶಾಸಕ ಗೋಪಾಲಯ್ಯ, ನಾನು ಸಿಎಂ ಭೇಟಿಯಾಗಿಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಗೋಪಾಲಯ್ಯ, ಯಾವುದೇ ಕಾರಣಕ್ಕೂ ನಾನು ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ. ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದನ್ನು ಸಾಬೀತುಪಡಿಸಿದರೆ ಬಹಿರಂಗವಾಗಿ ನೇಣಿಗೇರಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಇಂದು ಬೆಳಿಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಭೇಟಿಯಾದ ಗೋಪಾಲಯ್ಯ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಪಕ್ಷ ಬಿಡುತ್ತೇನೆ ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ. ನಿನ್ನೆಯಿಂದ ಸಾವಿರಾರು ಕರೆಗಳು ಬರುತ್ತಿವೆ. ನಾನು ಪಕ್ಷ ಬಿಡುತ್ತಿಲ್ಲ. ಯಾರನ್ನೂ ಭೇಟಿಯು ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ನನಗೆ ಗೌರವದ ಸ್ಥಾನಮಾನ ಕೊಟ್ಟಿದೆ. ಕ್ಷೇತ್ರದ ಜನ ನನಗೆ ಮತ ನೀಡಿ ಆಯ್ಕೆ ಮಾಡಿದ್ದಾರೆ. ಇನ್ನು 5 ವರ್ಷಗಳ ಕಾಲ ವಿಪಕ್ಷದಲ್ಲಿಯೇ ಕೆಲಸ ಮಾಡುತ್ತೇನೆ ಎಂದು ಹತ್ತು ದಿನಗಳ ಹಿಂದೆ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿಯೂ ತಿಳಿಸಿದ್ದೇನೆ ಎಂದರು.