ನವದೆಹಲಿ: ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅನುಮತಿ ಕಲ್ಪಿಸುವ ಮೂಲಕ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ರೋಹಿಂಗ್ಟನ್ ಫಾಲಿ ನಾರಿಮನ್ ನಿವೃತ್ತರಾಗಿದ್ದಾರೆ.
2014ರ ಜುಲೈ 7ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಆರ್.ಎಫ್. ನಾರಿಮನ್ ಅಧಿಕಾರ ವಹಿಸಿಕೊಂಡಿದ್ದರು. ಇದುವರೆಗೆ 13,500 ಪ್ರಕರಣಗಳನ್ನು ನಾರಿಮನ್ ಇತ್ಯರ್ಥಪಡಿಸಿದ್ದಾರೆ. ಕೇರಳ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ, ಸಮ್ಮತಿಯ ಸಲಿಂಗರತಿ ಅಪರಾಧ ಮುಕ್ತಗೊಳಿಸಿ ತೀರ್ಪು ಹಾಗೂ ಖಾಸಗಿತನ ಮೂಲಭೂತ ಹಕ್ಕು ಎಂದು ಘೋಷಿಸಲಾದ ಮಹತ್ವದ ತೀರ್ಪು ಸೇರಿದಂತೆ ಹಲವು ಐತಿಹಾಸಿಕ ತೀರ್ಪುಗಳನ್ನು ಅವರು ನೀಡಿದ್ದಾರೆ.
ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು, ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿನ ಸಿಂಹಗಳಲ್ಲಿ ಒಂದನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ನಾರಿಮನ್ ಅವರನ್ನು ಬಣ್ಣಿಸಿದ್ದಾರೆ.