
ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ವಿಷಯಕ್ಕೆ ಸಂಬಂಧಿಸಿದಂತೆ ವಿಭಿನ್ನ ತೀರ್ಪು ನೀಡಿ ಗಮನ ಸೆಳೆದಿದ್ದ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದ ಹಿರಿಯ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಶಬರಿಮಲೆಗೆ ಭೇಟಿ ನೀಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮ್ಮ ಭೇಟಿ ವೈಯಕ್ತಿಕ ಭಕ್ತಿಗೆ ಸಂಬಂಧಿಸಿದ್ದಾಗಿದೆ. ಇದಕ್ಕೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ 2018ರಲ್ಲಿ ತೀರ್ಪು ಹೊರ ಬಿದ್ದಿದ್ದು, ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದ ಇಂದೂ ಮಲ್ಹೋತ್ರ, ನಂಬಿಕೆ ಆಧಾರಿತ ಆಚರಣೆಗಳ ಕುರಿತು ನಿರ್ಣಯಿಸುವುದು ನ್ಯಾಯಾಲಯಗಳ ಕೆಲಸವಲ್ಲ. ʼಸತಿ ಪದ್ಧತಿʼ ಮಾದರಿಯ ಆಚರಣೆ ಇದ್ದರೆ ಮಾತ್ರ ನ್ಯಾಯಾಲಯಗಳು ಮಧ್ಯಪ್ರವೇಶಿಸಬೇಕು ಎಂದು ಹೇಳಿದ್ದರು.