ಬೆಂಗಳೂರು: ಉಪ ಲೋಕಾಯುಕ್ತರಾಗಿ ನ್ಯಾಯಮೂರ್ತಿ ಬಿ. ವೀರಪ್ಪ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯಪಾಲರಿಂದ ನೇಮಕಾತಿ ಆದೇಶ ಪ್ರಕಟಿಸಲಾಗಿದೆ.
ಉಪ ಲೋಕಾಯುಕ್ತರಾಗಿ ನ್ಯಾಯಮೂರ್ತಿ ಬಿ. ವೀರಪ್ಪ ನೇಮಕಾತಿಗೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೊಟ್ ಅಂಕಿತ ಹಾಕಿದ್ದಾರೆ.
ಜಸ್ಟಿಸ್ ಬಿ. ವೀರಪ್ಪ ಅವರನ್ನು ಉಪ ಲೋಕಾಯುಕ್ತರಾಗಿ ನೇಮಿಸುವಂತೆ ಶಿಫಾರಸು ಮಾಡಲಾಗಿತ್ತು. ಮುಖ್ಯಮಂತ್ರಿ, ವಿಪಕ್ಷ ನಾಯಕರು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಸ್ಪೀಕರ್, ಸಭಾಪತಿ ಎಲ್ಲರೊಂದಿಗೆ ಸಮಾಲೋಚನೆ ನಡೆಸಿ ನ್ಯಾಯಮೂರ್ತಿ ಬಿ. ವೀರಪ್ಪ ನೇಮಕಾತಿಗೆ ಶಿಫಾರಸು ಮಾಡಲಾಗಿತ್ತು. ಶಿಫಾರಸು ಅಂಗೀಕರಿಸಿದ ರಾಜ್ಯಪಾಲರು ನೇಮಕಾತಿ ಆದೇಶ ಹೊರಡಿಸಿದ್ದಾರೆ.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾಗಿರುವ ಬಿ. ವೀರಪ್ಪ ಅವರು ಪಿಎಸ್ಐ ನೇಮಕಾತಿ ಹಗರಣದ ತನಿಖಾ ಸಮಿತಿ ನೇತೃತ್ವ ವಹಿಸಿದ್ದರು. ತನಿಖೆ ನಡೆಸಿ ವರದಿ ಸಲ್ಲಿಸಿದ್ದರು.
ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ಸರ್ಕಾರ ಸ್ಥಾಪಿಸಿದ್ದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ರದ್ದುಪಡಿಸಿ, ಭ್ರಷ್ಟಾಚಾರ ತಡೆ ಕಾಯ್ದೆಯ ಅಧಿಕಾರವನ್ನು ಮತ್ತೆ ಲೋಕಾಯುಕ್ತಕ್ಕೆ ನೀಡಿದ್ದ ಹೈಕೋರ್ಟ್ ಪೀಠದ ನೇತೃತ್ವ ವಹಿಸಿದ್ದರು. ಅಲ್ಲದೇ, ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಆದಾಯ ತಂದ ಸಂಚಾರ ನಿಯಮ ಉಲ್ಲಂಘನೆ ದಂಡದ ಮೇಲೆ ಶೇ.50ರಷ್ಟು ರಿಯಾಯಿತಿ ಘೋಷಿಸಿದ ರಾಜ್ಯ ಸರ್ಕಾರ ಕ್ರಮದಲ್ಲಿ ನ್ಯಾಯಮೂರ್ತಿ ವೀರಪ್ಪ ಅವರ ಪಾತ್ರ ಪ್ರಮುಖವಾಗಿತ್ತು. ಅವರು ತಮ್ಮ ಅಧಿಕಾರಾವಧಿಯಲ್ಲಿ ಅನೇಕ ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ.
ಕೋಲಾರದ ಶ್ರೀನಿವಾಸಪುರ ತಾಲ್ಲೂಕಿನ ನಾಗದೇನಹಳ್ಳಿ ಗ್ರಾಮದ ನ್ಯಾಯಮೂರ್ತಿ ವೀರಪ್ಪ ಅವರು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ(ಕೆಎಸ್‌ಎಲ್‌ಎಸ್‌ಎ) ಅಧ್ಯಕ್ಷರಾಗಿ ಅತಿ ಹೆಚ್ಚು ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.