ಪಂಜಾಬ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ಪಕ್ಷದಿಂದಲೂ ಹೊರಗುಳಿಯುವುದಾಗಿ ಹೇಳಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಇಂದು ಅಧಿಕೃತವಾಗಿ ರಾಜೀನಾಮೆ ಪತ್ರವನ್ನು ಪಕ್ಷದ ಕಚೇರಿಗೆ ರವಾನಿಸಿದ್ದಾರೆ.
ಈಗಾಗಲೇ ಹೊಸ ಪಕ್ಷ ಸ್ಥಾಪನೆಯ ಬಗ್ಗೆ ಘೋಷಣೆ ಮಾಡಿದ್ದ ಅಮರೀಂದರ್ ಸಿಂಗ್ ಕಾಂಗ್ರೆಸ್ಗೆ ರಾಜೀನಾಮೆ ನೀಡ್ತಾರೆ ಎಂಬ ಸುದ್ದಿ ಪಕ್ಕಾ ಆಗಿತ್ತು. ಇಂದು ಶಿಷ್ಟಾಚಾರದಂತೆ ರಾಜೀನಾಮೆ ಪತ್ರ ನೀಡಿದ್ದಾರೆ.
ನವಜೋತ್ ಸಿಂಗ್ ಸಿಧು ಹಾಗೂ ಕ್ಯಾಪ್ಟನ್ ಅಮರಿಂದರ್ ಸಿಂಗ್ ನಡುವಿನ ಘರ್ಷಣೆ ರಾಜೀನಾಮೆ ಪತ್ರದಲ್ಲಿಯೂ ಹೊಗೆಯಾಡಿದಂತೆ ಕಂಡಿದೆ. ರಾಜೀನಾಮೆ ಪತ್ರದ ಉದ್ದಕ್ಕೂ ಕ್ಯಾಪ್ಟನ್ ಅಮರೀಂದರ್ ಸಿಂಗ್, ನವಜೋತ್ ಸಿಂಗ್ ಸಿಧು ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಹೊಸ ಪಕ್ಷ ಸ್ಥಾಪನೆ ಮಾಡುವ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅಧಿಕೃತ ಘೋಷಣೆ ಮಾಡಿದ್ದರು. ಚುನಾವಣಾ ಆಯೋಗ ಒಪ್ಪಿಗೆ ನೀಡಿದ ಬಳಿಕ ಪಕ್ಷದ ಹೆಸರು ಹಾಗೂ ಚಿಹ್ನೆಯನ್ನು ಬಹಿರಂಗ ಪಡಿಸುವುದಾಗಿ ಹೇಳಿದ್ದರು.