ಸಾಮಾಜಿಕ ಮಾಧ್ಯಮಗಳು ಇತ್ತೀಚಿಗೆ ಪ್ರಬಲ ಮಾಧ್ಯಮಗಳಾಗಿವೆ. ಸಹಾಯ ಮಾಡಲು ಇದೊಂದು ಅದ್ಭುತ ವೇದಿಕೆಯಾಗಿದೆ. ಇತ್ತೀಚಿಗೆ ಟೆಕ್ ಕಂಪನಿ ಫ್ಲ್ಯಾಶ್ನ ಮಾರ್ಕೆಟಿಂಗ್ ಮ್ಯಾನೇಜರ್ ಪ್ರಿಯಾಂಶಿ ಚಾಂಡೆಲ್ ಅವರು ತಮ್ಮ ನಿವಾಸಕ್ಕೆ ಆಹಾರವನ್ನು ತಲುಪಿಸಲು ಬಂದಿದ್ದ ಸ್ವಿಗ್ಗಿ ಡೆಲಿವರಿ ಏಜೆಂಟ್ ಬಗ್ಗೆ ಘಟನೆಯೊಂದನ್ನ ಹಂಚಿಕೊಂಡಿದ್ದರು. ಸಾಹಿಲ್ ಸಿಂಗ್ ಎಂದು ಗುರುತಿಸಲಾದ ಸ್ವಿಗ್ಗಿ ಡೆಲಿವರಿ ಏಜೆಂಟ್ ತಡವಾಗಿ ಆರ್ಡರ್ ತಂದಾಗ ನಾನು ಅವನನ್ನು ಏಕೆಂದು ಪ್ರಶ್ನಿಸಿದಾಗ ಆತ ಹೇಳಿದ, ಫುಡ್ ಡೆಲಿವರಿ ಮಾಡಲು ನನ್ನ ಬಳಿ ಯಾವುದೇ ವಾಹನವಿಲ್ಲ. ನಾನು ನಡೆದುಕೊಂಡೇ ಆರ್ಡರ್ ತಲುಪಿಸಬೇಕು. ಈ ಆರ್ಡರ್ ತಲುಪಿಸಲು 3 ಕಿಮೀ ನಡೆದು ಬಂದೆ ಎಂದ.
ಈ ವೇಳೆ ಆತ ನಾನು ಹಣವನ್ನ ಎದುರುನೋಡುತ್ತಿಲ್ಲ. ಬದಲಾಗಿ ನನಗೊಂದು ಕೆಲಸ ಕೊಡಿಸಲು ಸಹಾಯ ಮಾಡುವಂತೆ ಕೇಳಿಕೊಂಡ. ಆತ ಎಲೆಕ್ಟ್ರಿಕಲ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದು, ಇದಕ್ಕೂ ಮೊದಲು ಬೈಜುಸ್ ಮತ್ತು ನಿಂಜಾಕಾರ್ಟ್ನೊಂದಿಗೆ ಕೆಲಸ ಮಾಡಿದ್ದಾರೆ ಎಂದು ಅವರು ವಿವರಿಸಿದ್ದರು.
“ನಾನು ಒಂದು ವಾರದಿಂದ ಊಟ ಮಾಡಿಲ್ಲ, ನೀರು ಮತ್ತು ಚಹಾ ಮಾತ್ರ ಕುಡಿದು ಬದುಕುತ್ತಿದ್ದೇನೆ. ನಾನು ಏನನ್ನೂ ಕೇಳುತ್ತಿಲ್ಲ, ದಯವಿಟ್ಟು ನನಗೆ ಕೆಲಸ ಸಿಕ್ಕರೆ ಸಾಕು. ನಾನು ಮೊದಲು 25 ಸಾವಿರ ಸಂಪಾದಿಸುತ್ತಿದ್ದೆ. ನನಗೆ ಈಗ 30 ವರ್ಷ. ನನ್ನ ಹೆತ್ತವರಿಗೆ ವಯಸ್ಸಾಗಿದೆ. ನಾನು ಅವರ ಬಳಿ ಹಣವನ್ನು ಕೇಳಲು ಸಾಧ್ಯವಿಲ್ಲ” ಎಂದು ಡೆಲಿವರಿ ಬಾಯ್ ಹೇಳಿದ್ದಾಗಿ ಪೋಸ್ಟ್ ಮಾಡಿದ ಪ್ರಿಯಾಂಶಿ ಚಾಂಡೆಲ್ ಆತನಿಗೆ ಕೆಲಸ ಸಿಗಲು ನೆರವಾಗುವಂತೆ ಸಾಮಾಜಿಕ ಮಾಧ್ಯಮದಲ್ಲಿ ಕೋರಿದ್ದರು. ಇದಕ್ಕಾಗಿ ಸಹಾಯ ಮಾಡಲು ಡೆಲಿವರಿ ಏಜೆಂಟ್ ನ ಅಂಕಪಟ್ಟಿ ಮತ್ತು ಮೊಬೈಲ್ ಸಂಖ್ಯೆಯನ್ನೂ ಸಹ ಹಂಚಿಕೊಂಡಿದ್ದರು. ಹಂಚಿಕೊಂಡಿರುವ ಅಂಕಪಟ್ಟಿ ಪ್ರಕಾರ ಆತ ಮೇವಾರ್ ವಿಶ್ವವಿದ್ಯಾಲಯದಿಂದ 2018 ರ ಬಿಟೆಕ್ ಪದವೀಧರರಾಗಿದ್ದಾರೆ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯ ಮಂಡಳಿಯಿಂದ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.
ಪ್ರಿಯಾಂಶಿ ಚಾಂಡೆಲ್ ಆತನ ವಿವರಗಳನ್ನು ಹಂಚಿಕೊಂಡ ನಂತರ ಹಲವು ರೀತಿಯಲ್ಲಿ ಸಹಾಯ ಮಾಡಲು ನೆಟ್ಟಿಗರು ಮುಂದಾದರು. ಕೆಲವರು ಉದ್ಯೋಗ ನೀಡುವುದಾಗಿಯೂ ಹೇಳಿದರು. ಇದರ ಬಳಿಕ ಪ್ರಿಯಾಂಶಿ ಚಾಂಡೆಲ್ ಆತನಿಗೆ ಕೆಲಸ ಸಿಕ್ಕಿದೆ ಎಂದು ಮತ್ತೊಂದು ಪೋಸ್ಟ್ ಹಾಕಿದರು. ಆದರೆ ಈತನಿಗೆ ಯಾವ ಕೆಲಸ ಸಿಕ್ಕಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅದಾಗ್ಲೂ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್ ವಿದ್ಯಾವಂತ ನಿರುದ್ಯೋಗಿಗೆ ಕೆಲಸ ಸಿಗುವಂತೆ ಮಾಡಿದೆ.