ಜೈಪುರ: ವಿಚಿತ್ರ ಘಟನೆಯೊಂದರಲ್ಲಿ ನ್ಯಾಯಾಧೀಶರ ಮಗನ ಶೂ ಕಳುವಾಗಿದ್ದು, ಪತ್ತೆ ಕಾರ್ಯಕ್ಕಾಗಿ ಪೊಲೀಸರ ವಿಶೇಷ ತಂಡ ರಚನೆ ಮಾಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ರಾಜಸ್ಥಾನದ ಅಲ್ವಾರ್ ನ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಜೋಗೇಂದ್ರ ಕುಮಾರ್ ಅಗರ್ವಾಲ್ ತಮ್ಮ ಕುಟುಂಬದ ಜೊತೆಗೆ ಜೈಪುರದ ಬಡಿ ಚೌಪರ್ ಪ್ರದೇಶದಲ್ಲಿರುವ ಬ್ರಿಜ್ ನಿಧಿ ಮಂದಿರಕ್ಕೆ ಹೋಗಿದ್ದಾರೆ. ನ್ಯಾಯಾಧೀಶರ ಮಗ ಮಂದಿರದ ಹೊರಗೆ ಶೂ ತೆಗೆದು ಮಂದಿರದ ಒಳಗೆ ಹೋಗಿದ್ದಾರೆ. ಪೂಜೆ ಮುಗಿಸಿ ವಾಪಸ್ ಬಂದು ನೋಡಿದರೆ ಶೂ ಕಳ್ಳತನವಾಗಿದೆ. ನ್ಯಾಯಾಧೀಶರ ಮಗನ ಪಾದರಕ್ಷೆಯನ್ನು ಯಾರೋ ಕದ್ದೊಯ್ದಿದ್ದಾರೆ.
ಪಾದರಕ್ಷೆ ಪತ್ತೆಗಾಗಿ ನ್ಯಾಯಾಧೀಶರು ಮನಕ್ ಚೌಕ್ ಪೊಲೀಸ್ ಠಾಣೆಗೆ ಅಂಚೆ ಮೂಲಕ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ತಂಡ ರಚನೆ ಮಾಡಿದ್ದಾರಂತೆ. ಹೆಡ್ ಕಾನ್ಸ್ ಟೇಬಲ್ ಮಣಿರಾಮ್ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ನ್ಯಾಯಾಧೀಶರ ಮಗನ ಶೂ ಬೆಲೆ 10,000 ರೂಪಾಯಿ. ಹಾಗಾಗಿ ಬೆಲೆ ಬಾಳುವ ಶೂ ಕಳ್ಳತನವಾಗಿದ್ದರಿಂದ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿದಿಬಂದಿದೆ. ತನಿಖೆ ನಡೆಸಿರುವ ಪೊಲೀಸರು ದೇವಸ್ಥಾನದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.