ನವದೆಹಲಿ: ನ್ಯಾಯಾಧೀಶರು ಶಿಸ್ತು ಬದ್ಧ ಜೀವನ ನಡೆಸುವ ಅಗತ್ಯವಿದೆ. ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ದೂರವಿರಬೇಕಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ನ್ಯಾಯಾಂಗ ವಿಚಾರಗಳಲ್ಲಿ ಸ್ವಂತ ಅಭಿಪ್ರಾಯ ವ್ಯಕ್ತಪಡಿಸುವ ನಿರ್ಧಾರಗಳಿಂದ ನ್ಯಾಯಾಧೀಶರು ದೂರವಿರಬೇಕು ಎಂದು ಸೂಚಿಸಲಾಗಿದೆ.
ಪ್ರೊಬೇಷನರಿ ಅವಧಿಯಲ್ಲಿ ಅತೃಪ್ತಿಕರ ಕಾರ್ಯನಿರ್ವಹಣೆ ಆರೋಪದ ಮೇರೆಗೆ ಮಧ್ಯಪ್ರದೇಶ ಹೈಕೋರ್ಟ್, ಕೆಳಹಂತದ ನ್ಯಾಯಾಲಯದ ಇಬ್ಬರು ನ್ಯಾಯಾಧೀಶರನ್ನು ವಜಾಗೊಳಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ಎನ್. ಕೋಟೀಶ್ವರ ಸಿಂಗ್ ಅವರನ್ನು ಒಳಗೊಂಡ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿರಕ್ತರ ರೀತಿಯಲ್ಲಿ ನ್ಯಾಯಾಧೀಶರು ಬದುಕಬೇಕು. ಕುದುರೆಯ ರೀತಿ ಕಾರ್ಯನಿರ್ವಹಿಸಬೇಕು. ತೀರ್ಪುಗಳ ವಿಚಾರದಲ್ಲಿ ವೈಯಕ್ತಿಕ ಅಭಿಪ್ರಾಯ ಹೊರ ಹಾಕದೇ ಸಂಯಮ ಕಾಪಾಡಿಕೊಳ್ಳಬೇಕು ಎಂದು ಹೇಳಿದೆ.
ನ್ಯಾಯಾಧೀಶರು ಫೇಸ್ಬುಕ್ ಬಳಕೆಗೆ ಹೋಗಬಾರದು. ತೀರ್ಪುಗಳ ಬಗ್ಗೆ ಪ್ರತಿಕ್ರಿಯೆ ನೀಡಬಾರದು. ಇದೊಂದು ಮುಕ್ತ ವೇದಿಕೆಯಾಗಿರುತ್ತದೆ ಎಂದು ನ್ಯಾಯಪೀಠ ಎಚ್ಚರಿಸಿದ್ದು, ನ್ಯಾಯಾಂಗದಲ್ಲಿ ಆಡಂಬರಕ್ಕೆ ಜಾಗವಿಲ್ಲ ಎಂದು ತಿಳಿಸಿದೆ.
ವಜಾಗೊಂಡ ನ್ಯಾಯಾಧೀಶರ ಪೈಕಿ ಒಬ್ಬರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದನ್ನು ನ್ಯಾಯಪೀಠ ಗಮನಿಸಿದ್ದು, ನ್ಯಾಯಾಧೀಶರು ಸಾಮಾಜಿಕ ಮಾಧ್ಯಮಗಳ ಬಳಕೆಯಿಂದ ಆಗುವ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ನ್ಯಾಯಾಂಗದ ಅಧಿಕಾರಿ ಅಥವಾ ನ್ಯಾಯಾಧೀಶರು ತಮ್ಮ ಕೆಲಸಕ್ಕೆ ಸಂಬಂಧಿಸಿದ ಯಾವುದನ್ನೂ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಬಾರದು ಎಂದು ತಿಳಿಸಿದೆ.