ಬೆಂಗಳೂರು: ನ್ಯಾಯಾಧೀಶರು ಹಿಂದಿನ ಕಾಲದ ಮೊಘಲರ ರೀತಿ ವರ್ತಿಸುಬಾರದು, ನ್ಯಾಯದಾನದ ಹೆಸರಲ್ಲಿ ಕಾನೂನು ವ್ಯಾಪ್ತಿ ಮೀರಬಾರದು ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಾಧೀಶರು ಮೊಘಲರಂತೆ ವರ್ತಿಸುವಂತಿಲ್ಲ, ಕಾನೂನು ವ್ಯಾಪ್ತಿ ಮೀರಿ ನ್ಯಾಯಾಲಯದ ಆದೇಶ ಹೊರಡಿಸಬಾರದು ಎಂದು ಹೇಳಿದೆ. ಕಾನೂನಿನಡಿ 12 ವರ್ಷ ಮಾತ್ರ ಅಂಗಡಿ ಗುತ್ತಿಗೆ ನವೀಕರಿಸಲು ಅವಕಾಶವಿದ್ದರೂ 20 ವರ್ಷ ವಿಸ್ತರಿಸಲು ನಿರ್ಧರಿಸಿರುವುದು ಕಾನೂನುಬಾಹಿರವಾಗಿದೆ ಎಂದು ಹೇಳಿದ ಹೈಕೋರ್ಟ್ ವಿಭಾಗೀಯ ಪೀಠವು ಏಕ ಸದಸ್ಯ ಪೀಠದ ಆದೇಶವನ್ನು ರದ್ದುಪಡಿಸಿದೆ.
ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಚನ್ನಪಟ್ಟಣ ಪುರಸಭೆ ಸಲ್ಲಿಸಿದ ಮೇಲ್ಮನವಿ ವಿಚಾರಣೆ ಆಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರಿದ್ದ ಪೀಠದಿಂದ ಈ ಆದೇಶ ನೀಡಲಾಗಿದೆ.
ವಿಶೇಷ ಚೇತನರ ಕಾಯ್ದೆಯಡಿ ಗುತ್ತಿಗೆಯನ್ನು ಸಿದ್ದರಾಮು ಎಂಬುವರಿಗೆ ನಿರ್ದಿಷ್ಟ ಆಧಾರದ ಮೇಲೆ ನೀಡಿರುವುದನ್ನು ನ್ಯಾಯಪೀಠ ಗಮನಿಸಿದೆ. ಈ ಕುರಿತು 2009 ರ ಸುತ್ತೋಲೆಯಲ್ಲಿ ಗುತ್ತಿಗೆಯ ಅವಧಿ ಗರಿಷ್ಠ 12 ವರ್ಷ ಮಾತ್ರ ನವೀಕರಿಸಲು ಅವಕಾಶವಿದೆ ಎಂದು ಸರ್ಕಾರ ತಿಳಿಸಿದೆ. ಹಂಚಿಕೆಯನ್ನು ಅನುವಂಶೀಯವಾಗಿ ಪರಿಗಣಿಸಲಾಗುವುದಿಲ್ಲ. ಹಂಚಿಕೆದಾರನ ಮರಣದ ನಂತರ ಗುತ್ತಿಗೆ ಕೊನೆಯಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣ ಸಂಬಂಧ ಏಕ ಸದಸ್ಯ ಪೀಠದ ಆದೇಶ ಉಲ್ಲಂಘಿಸಿದ ನ್ಯಾಯಪೀಠ, ನ್ಯಾಯಾಧೀಶರು ಮೊಘಲರಂತೆ ವರ್ತಿಸುವಂತಿಲ್ಲ. ಕಾನೂನು ವ್ಯಾಪ್ತಿ ಮೀರಿ ನ್ಯಾಯಾಲಯ ಆದೇಶ ಹೊರಡಿಸಬಾರದು. ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ ಕಾನೂನು ಬದ್ಧ ಆದೇಶ ನೀಡಬೇಕಾಗುತ್ತದೆ. ನ್ಯಾಯ ಒದಗಿಸುವ ನೆಪದಲ್ಲಿ ಕಾನೂನು ಮೀರಿ ಅಧಿಕಾರ ಚಲಾಯಿಸುವಂತಿಲ್ಲ ಎಂದು ವಿಭಾಗೀಯ ಪೀಠ ತಿಳಿಸಿದೆ.
ಪತಿ ಕಳೆದುಕೊಂಡ ಪತ್ನಿ ಕುರಿತು ಅನುಕಂಪ ವ್ಯಕ್ತಪಡಿಸಿದ ನ್ಯಾಯಪೀಠ, ತನ್ನ ವ್ಯವಹಾರವನ್ನು ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡಲು ಕಾಲಾವಕಾಶ ನೀಡುವಂತೆ ಪುರಸಭೆಗೆ ನಿರ್ದೇಶನ ನೀಡಿದೆ.