ಜಪಾನ್ ನಲ್ಲಾದ ಭೂಕಂಪದ ವೇಳೆ ಕಂಡ ಭೀಕರತೆ ಮತ್ತು ಭಯಾನಕ ನೋವನ್ನ ನಟ ಜೂನಿಯರ್ ಎನ್ ಟಿ ಆರ್ ವ್ಯಕ್ತಪಡಿಸಿದ್ದಾರೆ. ಕ್ರಿಸ್ ಮಸ್ ಮತ್ತು ಹೊಸವರ್ಷದ ಹಿನ್ನೆಲೆಯಲ್ಲಿ ದೀರ್ಘಕಾಲದ ರಜೆಯನ್ನ ತಮ್ಮ ಕುಟುಂಬದ ಜೊತೆ ಕಳೆಯಲು ಜೂನಿಯರ್ ಎನ್ ಟಿ ಆರ್ ತಮ್ಮ ಪತ್ನಿ ಲಕ್ಷ್ಮಿ ಪ್ರಣತಿ ಮತ್ತು ಅವರ ಇಬ್ಬರು ಮಕ್ಕಳಾದ ಭಾರ್ಗವ್ ಮತ್ತು ಅಭಯ್ ಅವರೊಂದಿಗೆ ಜಪಾನ್ ಪ್ರವಾಸಕ್ಕೆ ತೆರಳಿದ್ರು. ಅಲ್ಲಿಯೇ ಕ್ರಿಸ್ ಮಸ್ ಮತ್ತು ಹೊಸ ವರ್ಷ ಆಚರಿಸಿದ ಅವರು ಮಂಗಳವಾರ ಮಧ್ಯರಾತ್ರಿ ತವರಿಗೆ ವಾಪಸ್ಸಾಗಿದ್ದು ಜಪಾನ್ ನಲ್ಲಿ ಕಂಡ ಭೂಕಂಪನದ ನೋವನ್ನ ಹೊರಹಾಕಿದ್ದಾರೆ.
ತಮ್ಮ ಟ್ವಿಟರ್ ನಲ್ಲಿ , “ಜಪಾನ್‌ನಿಂದ ಇಂದು ಮನೆಗೆ ಹಿಂತಿರುಗಿದ್ದೇವೆ ಮತ್ತು ಅಲ್ಲಿ ಸಂಭವಿಸಿದ ಭೂಕಂಪನಗಳಿಂದ ತೀವ್ರವಾಗಿ ಆಘಾತಕ್ಕೊಳಗಾಗಿದ್ದೇವೆ. ಕಳೆದ ವಾರ ಪೂರ್ತಿಯಾಗಿ ಅಲ್ಲಿಯೇ ದಿನಗಳನ್ನ ಕಳೆದಿದ್ದೇನೆ. ನನ್ನ ಹೃದಯವು ಬಾಧಿತರಾದ ಪ್ರತಿಯೊಬ್ಬರಿಗೂ ದುಃಖಿಸುತ್ತದೆ. ಜನರು ಬದುಕುಳಿದಿರುವುದಕ್ಕೆ ಕೃತಜ್ಞರಾಗಿರುತ್ತೇನೆ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳಲು ಆಶಿಸುತ್ತೇನೆ. ಜಪಾನ್ ಬಲವಾಗಿರಲಿ ” ಎಂದು ತಿಳಿಸಿದ್ದಾರೆ.
ಇಶಿಕಾವಾದಲ್ಲಿ ಸಂಭವಿಸಿದ 7.6 ತೀವ್ರತೆಯ ಭೂಕಂಪ ಸೇರಿದಂತೆ ಜಪಾನ್‌ನಲ್ಲಿ ಸೋಮವಾರ 155 ಭೂಕಂಪಗಳು ಸಂಭವಿಸಿವೆ. ಸೋಮವಾರ ರಾತ್ರಿ ಜಪಾನಿನ ಸರ್ಕಾರವು 97,000 ಕ್ಕೂ ಹೆಚ್ಚು ಮಂದಿಗೆ ತಮ್ಮ ಮನೆಗಳನ್ನು ತೊರೆಯುವಂತೆ ಆದೇಶಿಸಿದ್ದು ಕ್ರೀಡಾಂಗಣದಂತಹ ಸುರಕ್ಷಿತ ಬಯಲು ಪ್ರದೇಶದಲ್ಲಿ ಸೇರಲು ತಿಳಿಸಿದೆ. ಜಪಾನ್ ನಲ್ಲಿ ಸಂಭವಿಸಿದ ಭೂಕಂಪನದಲ್ಲಿ ಇದುವರೆಗೂ 30 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.