ಹೈದರಾಬಾದ್: ಜೂನಿಯರ್ ಎನ್ಟಿಆರ್ ಅಭಿನಯದ ‘ದೇವರ’ ಸಿನಿಮಾ ಬಿಡುಗಡೆಯಾದಲ್ಲೆಲ್ಲ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಇದೇ ವೇಳೆ ಖುಷಿಯಿಂದ ಸಿನಿಮಾ ವೀಕ್ಷಿಸುತ್ತಿದ್ದ ಜೂನಿಯರ್ ಎನ್ಟಿಆರ್ ಅಭಿಮಾನಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ. ಮಸ್ತಾನ್ ವಲಿ(35) ಮೃತಪಟ್ಟವರು ಎಂದು ಹೇಳಲಾಗಿದೆ. ‘ದೇವರ’ ಸಿನಿಮಾ ವೀಕ್ಷಿಸುವಾಗ ಕುಸಿದು ಬಿದ್ದ ಮಸ್ತಾನ್ ವಲಿ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಅವರು ಈಗಾಗಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.
ಬಿಡುಗಡೆಯಾದಲ್ಲೆಲ್ಲಾ ಗ್ರಾಂಡ್ ಓಪನಿಂಗ್ ಪಡೆದುಕೊಂಡ ‘ದೇವರ’ ಸಿನಿಮಾಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೊದಲ ದಿನವೇ ಬಾಕ್ಸಾಫೀಸ್ ನಲ್ಲಿ 77 ಕೋಟಿ ರೂ. ಕಲೆಕ್ಷನ್ ಮಾಡಿದ ‘ದೇವರ’ ವೀಕೆಂಡ್ ನಲ್ಲಿಯೂ ಹೆಚ್ಚಿನ ಗಳಿಕೆ ನಿರೀಕ್ಷೆ ಮೂಡಿಸಿದೆ.