ಚಿತ್ರದುರ್ಗ: ದೇಶದಲ್ಲಿ ಸಾಮಾಜಿಕ ಭದ್ರತೆಯ ಕೆಲಸ ಮಾಡಬೇಕಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಅಟಲ್ ಸುರಕ್ಷಾ ಯೋಜನೆ, ಆಯುಷ್ಮಾನ್ ಭಾರತ್, ಗರೀಬ್ ಕಲ್ಯಾಣ ಸೇರಿದಂತೆ ವಿವಿಧ ಯೋಜನೆಗಳನ್ನು ಸಾಕಾರಗೊಳಿಸಬೇಕಿದೆ ಎಂದು ತಿಳಿಸಿದ್ದಾರೆ.
FDI ನಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಪಡಿತರ ಕಾರ್ಡ್ ಹೆಚ್ಚಿಸುವ ಕೆಲಸವನ್ನು ಬೊಮ್ಮಾಯಿ ಸರ್ಕಾರ ಮಾಡಿದೆ. ಕೊರೋನಾ ಸಂದರ್ಭದಲ್ಲಿ ಆಹಾರ ಭದ್ರತೆ ಒದಗಿಸಲಾಗಿದೆ. ಗರೀಬ್ ಕಲ್ಯಾಣ ಯೋಜನೆಯಡಿ ಆಹಾರ ಭದ್ರತೆ ಒದಗಿಸಲಾಗಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದರು.
ರೈತರ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿದೆ. ಕಾಫಿ ಸೇರಿದಂತೆ ಇತರೆ ಬೆಳೆಗಳಿಗೆ ಉತ್ತಮ ಅವಕಾಶ ಸಿಕ್ಕಿದೆ. ದೇಶದ ರಕ್ಷಣೆಗಾಗಿ ಪ್ರಧಾನಿ ಮೋದಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ದೇಶದ ಗಡಿ ತಲುಪಲು 24 ಗಂಟೆ ಸಾಕು ಎನ್ನುವ ಸ್ಥಿತಿ ಈಗ ಇದೆ. ಯಾವುದೇ ಸಂದರ್ಭದಲ್ಲಿ ಸೇನೆ ಯುದ್ಧಕ್ಕೆ ಸನ್ನದ್ಧವಾಗಿರುತ್ತದೆ. ನಾವು ಯಾವುದೇ ದೇಶದ ಭೂಮಿ ಒತ್ತುವರಿ ಮಾಡಲ್ಲ. ನಮ್ಮ ತಂಟೆಗೆ ಬಂದರೆ ನಾವು ಸುಮ್ಮನೆ ಕೂರುವುದಿಲ್ಲ ಎನ್ನುವ ಸಂದೇಶ ರವಾನಿಸಲಾಗಿದೆ. ಯಾವತ್ತಾದರೂ ಯಾರಾದರೂ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದರೇ? ಕಾರ್ಗಿಲ್ ನಲ್ಲಿಯೂ ವಾಜಪೇಯಿ ಕಾಲದಲ್ಲೇ ಉತ್ತರ ನೀಡಲಾಗಿತ್ತು. ಪಾಕಿಸ್ತಾನದ ಮುಖಕ್ಕೆ ಹೊಡೆದಂತೆ ಮೋದಿ ಸರ್ಕಾರ ಉತ್ತರ ನೀಡಿದೆ ಎಂದು ಜೆ.ಪಿ. ನಡ್ಡಾ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು ಕರ್ನಾಟಕದಲ್ಲಿ ಯಶಸ್ವಿಯಾಗಿ ಜಾರಿಯಾಗಿವೆ. ಡ್ರೋನ್ ಮೂಲಕ ಜಮೀನು ಸರ್ವೆ ಮಾಡಲಾಗಿದೆ. ಮನೆಮನೆಗೆ ಭೂ ದಾಖಲೆ ತಲುಪಿಸುವ ಕೆಲಸ ನಡೆದಿದೆ. ಗ್ರಾಮ ಸ್ವರಾಜ್ ಯೋಜನೆ ಮೂಲಕ ಗ್ರಾಮಗಳ ಅಭಿವೃದ್ಧಿ ಮಾಡಲಾಗಿದ್ದು, ಗ್ರಾಮವಿಕಾಸದ ಯೋಜನೆ ಸ್ಥಳೀಯರಿಂದಲೇ ನಡೆಯಲಿದೆ. ಜಿಲ್ಲೆಯ ಜಿಲ್ಲಾಧಿಕಾರಿ ಗ್ರಾಮಗಳ ಅಭಿವೃದ್ಧಿಗೆ ಹಣ ನೀಡುತ್ತಾರೆ. ಡಿಜಿಟಲ್ ಇಂಡಿಯಾ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಮಾಡಲಾಗಿದೆ. ಆಪ್ಟಿಕಲ್ ಫೈಬರ್ ಮೂಲಕ ಗ್ರಾಮೀಣ ಭಾಗಗಳನ್ನು ಜೋಡಣೆ ಮಾಡಲಾಗಿದೆ ಎಂದರು.