ಬೆಂಗಳೂರು : ಕಳಪೆ ಗುಣಮಟ್ಟದ ಔಷಧಿಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಜೆಪಿ ನಡ್ಡಾ ಅವರಿಗೆ ಪತ್ರ ಬರೆದಿದ್ದೆವು. ಆದರೆ, ಈವರೆಗೆ ಪತ್ರಕ್ಕೆ ಯಾವುದೇ ಪ್ರತಿಕ್ರಿಯ ತೋರದೆ ಜನರ ಜೀವದ ಜೊತೆಗೆ ಆಟವಾಡುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಪತ್ರದಲ್ಲಿ ರಾಜ್ಯ ಪ್ರಯೋಗಾಲಯದ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿರುವ ಬೇರೆ ರಾಜ್ಯಗಳಲ್ಲಿ ತಯಾರಾಗಿರುವ ಒಂಬತ್ತು ಚುಚ್ಚುಮದ್ದುಗಳನ್ನು ನಿಷೇಧಿಸುವಂತೆ ಒತ್ತಾಯಿಸಲಾಗಿದೆ. ಕೇಂದ್ರ ಮತ್ತು ರಾಜ್ಯಗಳ ಪ್ರಯೋಗಾಲಯಗಳ ನಡುವೆ ಗುಣಮಟ್ಟ ಪರೀಕ್ಷೆಯ ಮಾಹಿತಿ ಹಂಚಿಕೊಳ್ಳಲು ವ್ಯವಸ್ಥೆ ರಚಿಸಬೇಕು ಎಂಬುದು ಕೂಡ ನಮ್ಮ ಮನವಿ. ಆದರೆ, ಇಷ್ಟು ದಿನವಾದರೂ ನಮ್ಮ ಪತ್ರಕ್ಕೆ ಯಾವುದೇ ಸ್ಪಂದನೆ ದೊರೆತಿಲ್ಲ.
ಜನರ ಆರೋಗ್ಯದ ವಿಷಯದಲ್ಲಿ ಕೇಂದ್ರ ಸರ್ಕಾರದ ಇಂತಹ ನಿರ್ಲಕ್ಷ್ಯವನ್ನು ನಾವು ಖಂಡಿಸುತ್ತೇವೆ. ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಬದ್ಧವಾಗಿರುವ ನಾವುಗಳು ಜನಪರವಾದ ವಿಷಯಗಳಿಗೆ ತಕ್ಷಣ ಸ್ಪಂದಿಸಬೇಕು. ಕೇಂದ್ರ ಸರ್ಕಾರ ಈ ವಿಷಯದಲ್ಲಿ ತನ್ನ ಬದ್ಧತೆ ತೋರಿಸಲಿ ಎಂದು ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.