ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಬಿಜೆಪಿ ರಾಷ್ಟ್ರೀಯ ಘಟಕಕ್ಕೆ ಹೊಸ ಅಧ್ಯಕ್ಷರನ್ನು ಶೀಘ್ರವೇ ನೇಮಕ ಮಾಡಲಾಗುವುದು.
2014ರಲ್ಲಿ ರಾಜನಾಥ್ ಸಿಂಗ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಅವರು ಕೇಂದ್ರ ಸಂಪುಟಕ್ಕೆ ಸೇರಿದ ನಂತರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅಮಿತ್ ಶಾ ಸಾರಥ್ಯ ವಹಿಸಿಕೊಂಡಿದ್ದರು. 2019ರಲ್ಲಿ ಅಮಿತ್ ಶಾ ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗಿದ್ದರು. 2020ರಲ್ಲಿ ನಡ್ಡಾ ಬಿಜೆಪಿ ಅಧ್ಯಕ್ಷರಾಗಿದ್ದು, ಅವರ ಅವಧಿಯನ್ನು ಎರಡು ಬಾರಿ ವಿಸ್ತರಿಸಲಾಗಿತ್ತು.
ಮೋದಿಯವರ ಮೊದಲ ಸರ್ಕಾರದಲ್ಲಿ 5 ವರ್ಷ ನಡ್ಡಾ ಸಚಿವರಾಗಿದ್ದರು. 2014 ರಿಂದ 2019 ರವರೆಗೆ ಕೇಂದ್ರ ಆರೋಗ್ಯ ಖಾತೆ ಸಚಿವರಾಗಿ ನಡ್ಡಾ ಕಾರ್ಯ ನಿರ್ವಹಿಸಿದ್ದರು. 2020ರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅವರನ್ನು ಆಯ್ಕೆ ಮಾಡಲಾಗಿತ್ತು.
ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಶಿವರಾಜ್ ಸಿಂಗ್ ಚೌಹಾಣ್ ಅವರೂ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹೀಗಾಗಿ ಬಿಜೆಪಿಯ ಮುಂದಿನ ಸಾರಥಿ ಯಾರು ಎಂಬುದು ಭಾರೀ ಕುತೂಹಲ ಮೂಡಿಸಿದೆ.