ನವದೆಹಲಿ: ಸುಪ್ರೀಂ ಕೋರ್ಟ್ ನ ವರದಿಗಾರಿಕೆ ಮಾಡುವ ಪತ್ರಕರ್ತರಿಗೆ ಕಾನೂನು ಪದವಿ ಅಗತ್ಯವಿಲ್ಲ ಎಂದು ಸುಪ್ರೀಂ ಆಡಳಿತ ಮಂಡಳಿ ನಿರ್ಧರಿಸಿರುವುದಾಗಿ ಸಿಜೆಐ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ವರದಿಗಾರಿಕೆಗೆ ಅಗತ್ಯವಿರುವ ಮಾನ್ಯತಾ ಪತ್ರ ಪಡೆಯಲು ಈ ಮೊದಲು ಕಾನೂನು ಪದವಿ ಅಗತ್ಯವಾಗಿತ್ತು. ಆದರೆ, ಈಗ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದಲ್ಲಿ ನ್ಯಾಯಾಲಯದ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್ ನ ವರದಿಗಾರಿಕೆಗೆ ಕಾನೂನು ಪದವೇ ಅಗತ್ಯವಿಲ್ಲ ಎನ್ನುವ ನಿರ್ಣಯ ಕೈಗೊಂಡಿದೆ.
ಸುಪ್ರೀಂ ಕೋರ್ಟ್ ನ ವರದಿಗಾರಿಕೆ ಮಾಡುವವರಿಗೆ ಕಾನೂನು ಪದವಿ ಅವಶ್ಯವಿಲ್ಲ ಎನ್ನುವ ಕಡತಕ್ಕೆ ಸಹಿ ಹಾಕಿದ್ದೇನೆ. ಕಾನೂನು ಪದವಿ ಪೂರೈಸಿದವರೇ ನ್ಯಾಯಾಲಯಗಳ ವರದಿಗಾರಿಕೆ ಮಾಡಬೇಕು ಎಂದು ಏಕೆ ಷರತ್ತು ವಿಧಿಸಲಾಗಿತ್ತು ಎಂದು ನನಗೆ ತಿಳಿದಿಲ್ಲ. ಕಾನೂನು ಹಿನ್ನೆಲೆ ಇಲ್ಲದ ಆದರೆ ಕಾನೂನಿನ ಬಗ್ಗೆ ಸಾಮಾನ್ಯ ತಿಳಿವಳಿಕೆಯಿಂದ ಪತ್ರಕರ್ತರು ವರದಿಗೆ ಮಾಡಲು ಅವಕಾಶವಿದೆ ಎಂದು ಸಿಜೆಐ ಚಂದ್ರಚೂಡ್ ತಿಳಿಸಿದ್ದಾರೆ.