ಶ್ರೀನಗರದ ರೈನಾವಾರಿ ಪ್ರದೇಶದಲ್ಲಿ ಬುಧವಾರ ಮುಂಜಾನೆ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ.
ರಯೀಸ್ ಅಹ್ಮದ್ ಭಟ್ ಎಂದು ಗುರುತಿಸಲಾದ ಭಯೋತ್ಪಾದಕ ಅನಂತನಾಗ್ ನಲ್ಲಿ ಆನ್ ಲೈನ್ ನ್ಯೂಸ್ ಪೋರ್ಟಲ್ ‘ವ್ಯಾಲಿ ನ್ಯೂಸ್ ಸರ್ವಿಸ್’ ನಡೆಸುತ್ತಿದ್ದ ಮಾಜಿ ಪತ್ರಕರ್ತನಾಗಿದ್ದಾನೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಭಟ್ ಕಳೆದ ವರ್ಷ ಆಗಸ್ಟ್ ನಲ್ಲಿ ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕ ಸೇರಿದ್ದು, ಪೊಲೀಸರ ಭಯೋತ್ಪಾದಕರ ಪಟ್ಟಿಯಲ್ಲಿ ‘ಸಿ’ ಎಂದು ವರ್ಗೀಕರಿಸಲಾಗಿತ್ತು. ಭಯೋತ್ಪಾದಕ ಅಪರಾಧಗಳಿಗಾಗಿ ಆತನ ವಿರುದ್ಧ ಈಗಾಗಲೇ ಎರಡು ಎಫ್‌ಐಆರ್ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಜಿ ಪತ್ರಕರ್ತರೊಬ್ಬರು ಭಯೋತ್ಪಾದನಾ ಅಪರಾಧಗಳಲ್ಲಿ ಭಾಗಿಯಾಗಿರುವುದು ಮಾಧ್ಯಮಗಳ ದುರುಪಯೋಗದ ಸ್ಪಷ್ಟ ನಿದರ್ಶನ ಇದಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.
ಎನ್ ಕೌಂಟರ್ ನಲ್ಲಿ ಹತರಾದ ಮತ್ತೊಬ್ಬ ಭಯೋತ್ಪಾದಕನನ್ನು ಬಿಜ್ ಬೆಹರಾ ನಿವಾಸಿ ಹಿಲಾಲ್ ಅಹ್ಮದ್ ರಹಮ್ ಎಂದು ಗುರುತಿಸಲಾಗಿದೆ. ಹಿಲಾಲ್ ಕೂಡ ‘ಸಿ’ ವರ್ಗದ ಭಯೋತ್ಪಾದಕನಾಗಿದ್ದ. ನಾಗರಿಕ ಹತ್ಯೆಗಳು ಸೇರಿದಂತೆ ಇತ್ತೀಚಿನ ಹಲವಾರು ಭಯೋತ್ಪಾದಕ ಅಪರಾಧಗಳಲ್ಲಿ ಇಬ್ಬರೂ ಭಾಗಿಯಾಗಿದ್ದಾರೆ ಎಂದು ವಿಜಯ್ ಕುಮಾರ್ ಹೇಳಿದರು.
ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಸಿ.ಆರ್.ಪಿ.ಎಫ್. ಜಂಟಿಯಾಗಿ ಎನ್ ಕೌಂಟರ್ ನಡೆಸಿವೆ. ಘಟನಾ ಸ್ಥಳದಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.