
ಶಿವಮೊಗ್ಗ: ಪತ್ರಕರ್ತನ ಮೇಲೆ ತೀರ್ಥಹಳ್ಳಿ ಸಿಪಿಐ ದರ್ಪ ತೋರಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಇದನ್ನು ವಿರೋಧಿಸಿ ಪೊಲೀಸ್ ಠಾಣೆ ಎದುರು ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಪತ್ರಕರ್ತ ನಿರಂಜನ್ ಗೆ ಸಿಪಿಐ ಅಶ್ವತ್ಥ್ ಗೌಡ ಬೆದರಿಕೆ ಹಾಕಿದ್ದಾರೆ. ತೀರ್ಥಹಳ್ಳಿ ಠಾಣೆಗೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿದ್ದರು. ರಥ ಬೀದಿಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ಜಾಮ್ ಸರಿಪಡಿಸುವಂತೆ ಸಾರ್ವಜನಿಕರು ಕೇಳಿದ್ದಾರೆ.
ಈ ವೇಳೆ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ವಾಗ್ವಾದ ನಡೆದಿದೆ. ಘಟನೆಯನ್ನು ವರದಿಗಾರ ನಿರಂಜನ್ ವಿಡಿಯೋ ಮಾಡಿದ್ದಾರೆ. ಇದನ್ನು ಗಮನಿಸಿದ ತೀರ್ಥಹಳ್ಳಿ ಸಿಪಿಐ ಅಶ್ವತ್ಥ್ ಗೌಡ ಬಲವಂತವಾಗಿ ಮೊಬೈಲ್ ಕಸಿದುಕೊಂಡು ವಿಡಿಯೋ ಡಿಲೀಟ್ ಮಾಡಿ ಬೆದರಿಕೆ ಹಾಕಿದ್ದಾರೆ. ಪೋಕ್ಸೋ ಕೇಸು ಹಾಕುತ್ತೇನೆ ಎಂದು ಧಮಕಿ ಹಾಕಿದ್ದಾರೆ.
ಪತ್ರಕರ್ತ ನಿರಂಜನ್ ಗೆ ಬೆದರಿಕೆ ಹಾಕಿದ ಸಿಪಿಐ ವರ್ತನೆ ಖಂಡಿಸಿ ಠಾಣೆ ಎದುರು ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ. ದಬ್ಬಾಳಿಕೆ ನಡೆಸಿದ ಸಿಪಿಐ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ತೀರ್ಥಹಳ್ಳಿ ಪೊಲೀಸ್ ಠಾಣೆ ಎದುರು ಪತ್ರಕರ್ತರ ಪ್ರತಿಭಟನೆ ನಡೆದಿದ್ದು, ಮಾಹಿತಿ ತಿಳಿದ ಮಾಜಿ ಸಚಿವರಾದ ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್ ಕೂಡ ಆಗಮಿಸಿದ್ದಾರೆ.
ಖಂಡನೆ:
ತೀರ್ಥಹಳ್ಳಿ ಪತ್ರಕರ್ತ ನಿರಂಜನ್ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿರುವ ತೀರ್ಥಹಳ್ಳಿ ಇನ್ಸೆಕ್ಟರ್ ಅಶ್ವಥ್ ಗೌಡ ಕ್ರಮವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ.
ಪತ್ರಕರ್ತ ನಿರಂಜನ್ ಮೇಲೆ ದೈಹಿಕ ಹಲ್ಲೆಗೂ ಯತ್ನಿಸಿರುವುದು ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ಮೇಲೆ ನಡೆದ ದಬ್ಬಾಳಿಕೆ. ಇದನ್ನು ಜಿಲ್ಲಾ ರಕ್ಷಣಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಸಂಘದ ಅಧ್ಯಕ್ಷ ಕೆ.ವಿ. ಶಿವಕುಮಾರ್, ರಾಜ್ಯಸಮಿತಿ ಸದಸ್ಯ ಎನ್. ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಆಗ್ರಹಿಸಿದ್ದಾರೆ.