ಬಿಜೆಪಿ ಶಾಸಕರಾದ ಸುದೀಪ್ ರಾಯ್ ಬರ್ಮನ್ ಮತ್ತು ಆಶಿಶ್ ಸಾಹಾ ಅವರು ಸೋಮವಾರ ತ್ರಿಪುರಾ ವಿಧಾನಸಭೆಗೆ ರಾಜೀನಾಮೆ ನೀಡಿದ್ದು, ತಮ್ಮ ಪಕ್ಷದ ಸದಸ್ಯತ್ವವನ್ನೂ ತ್ಯಜಿಸಿದ್ದಾರೆ.
ರಾಯ್ ಬರ್ಮನ್ ಮತ್ತು ಸಾಹಾ ಅವರು ಸ್ಪೀಕರ್ ರತನ್ ಚಕ್ರವರ್ತಿ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ನೀಡಿದರು.
ಸಾಹಾ ಅವರನ್ನ ಬರ್ಮನ್ ಅವರ ಆಪ್ತ ಎಂದು ಗುರುತಿಸಲಾಗಿದೆ. ಇಬ್ಬರು ಶಾಸಕರು ಕಾಂಗ್ರೆಸ್ ಸೇರಬಹುದು ಎಂಬ ಊಹಾ ಪೋಹಗಳು ಇವೆ. ಈ ನಡುವೆ ಇಬ್ಬರು ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ತಮ್ಮ ಮುಂದಿನ ನಡೆಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಮಂಗಳವಾರ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಕಳೆದ ವಾರ ಸುದೀಪ್ ರಾಯ್ ಬರ್ಮನ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಜ್ಯದಲ್ಲಿ ಬಿಜೆಪಿ ಆಡಳಿತದಿಂದ ಪ್ರಜಾಪ್ರಭುತ್ವ ಕಾಣೆಯಾಗಿದೆ. ಜನರು ಉಸಿರುಗಟ್ಟುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ರೆಬೆಲ್ ಶಾಸಕ ಬರ್ಮನ್ ಹೇಳಿದ್ದರು.
ಬಿಜೆಪಿಯು ಬರ್ಮನ್ ಅವರ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಸಮಯ ಬಂದಾಗ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಗ ಹೇಳಿತ್ತು. ವಿಧಾನಸಭೆ ಚುನಾವಣೆಗೆ ಮುನ್ನ ಬರ್ಮನ್ 2017ರಲ್ಲಿ ತೃಣಮೂಲ ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ್ದರು. ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರು “ಬಿಜೆಪಿಯಲ್ಲಿನ ಅಂತರಂಗ ಶತ್ರುಗಳ” ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಕೆಲ ದಿನಗಳ ನಂತರ, ಜೂನ್ 2019ರಲ್ಲಿ ಬರ್ಮನ್ ಅವರನ್ನು ಆರೋಗ್ಯ ಸಚಿವ ಸ್ಥಾನದಿಂದ ತೆಗೆದುಹಾಕಲಾಗಿತ್ತು ಎಂಬುದನ್ನ ಇಲ್ಲಿ ಸ್ಮರಿಸಬೇಕು.