ಜಾನ್ಸನ್ & ಜಾನ್ಸನ್ ಕಂಪನಿಯು ತಮ್ಮ ಸಿಂಗಲ್ ಶಾಟ್ ಕೊರೊನಾ ಲಸಿಕೆಯು ಡೆಲ್ಟಾ ರೂಪಾಂತರಿಗಳನ್ನ ತಟಸ್ಥಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದೆ. ಅಲ್ಲದೇ ಈ ಲಸಿಕೆಗಳು ಕೊರೊನಾ ವಿರುದ್ಧ ಹೆಚ್ಚಿನ ರಕ್ಷಣೆಯನ್ನ ಒದಗಿಸುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಈ ಸಿಂಗಲ್ ಶಾಟ್ ಲಸಿಕೆಗಳು ಕನಿಷ್ಟ 8 ತಿಂಗಳುಗಳ ಕಾಲ ಡೆಲ್ಟಾ ಸೇರಿದಂತೆ ವಿವಿಧ ರೂಪಾಂತರಿಗಳನ್ನ ತಟಸ್ಥಗೊಳಿಸುವ ಆಂಟಿಬಾಡಿಗಳನ್ನ ಉತ್ಪಾದನೆ ಮಾಡುತ್ತವೆ ಎಂದು ಹೇಳಿದೆ. ಡೆಲ್ಟಾ ರೂಪಾಂತರಿಗಳು ಮೊದಲು ಭಾರತದಲ್ಲೇ ಕಾಣಿಸಿಕೊಂಡಿದ್ದು ಇದೀಗ ವಿಶ್ವಾದ್ಯಂತ ವ್ಯಾಪಿಸುತ್ತಿದೆ.
ಮುಂದಿನ ದಿನಗಳಲ್ಲಿ ಅಮೆರಿಕದಲ್ಲಿ ಡೆಲ್ಟಾ ರೂಪಾಂತರಿಗಳು ಹೊಸ ಅಲೆಯನ್ನೇ ಹುಟ್ಟುಹಾಕುವ ಸಾಧ್ಯತೆ ದಟ್ಟವಾಗಿದೆ. ರೋಗ ನಿಯಂತ್ರಣ ಹಾಗೂ ತಡೆಗಟ್ಟುವ ಕೇಂದ್ರವು ಈ ಬಗ್ಗೆ ಮಾಹಿತಿ ನೀಡಿದೆ.
ನಮಗೆ ಬೇರೆ ಬೂಸ್ಟರ್ಗಳ ಅವಶ್ಯಕತೆ ಇಲ್ಲ. ನಮ್ಮ ಕೊರೊನಾ ಲಸಿಕೆಗಳು ಸೋಂಕಿನ ಎಲ್ಲಾ ರೂಪಾಂತರಿಗಳನ್ನ ತಟಸ್ಥಗೊಳಿಸುವ ಸಾಮರ್ಥ್ಯ ಎಂಬುದನ್ನ ನಾವು ಅತ್ಯಂತ ಸಂತೋಷ ಹಾಗೂ ಆತ್ಮವಿಶ್ವಾಸದಿಂದ ಹೇಳುತ್ತೇವೆ ಎಂದು ಜಾನ್ಸನ್ & ಜಾನ್ಸನ್ ಕಂಪನಿಯ ಜೋಹಾನ್ ವಾನ್ ಹೂಫ್ ಹೇಳಿದ್ರು.
ಮೊದಲ ಡೋಸ್ ಪಡೆದ 29 ದಿನಗಳಲ್ಲಿ ಈ ಲಸಿಕೆಯು ಕೊರೊನಾ ಸೋಂಕಿನ ಪರಿಣಾಮವನ್ನ ತಟಸ್ಥಗೊಳಿಸಲಿದೆ ಎಂದು ಕಂಪನಿ ಹೇಳಿದೆ.