ಸದಾ ಆರೋಗ್ಯವಾಗಿರಲು ಪ್ರತಿದಿನ ವ್ಯಾಯಾಮ ಮಾಡಬೇಕು. ಯೋಗಾಸನ, ಜಿಮ್ ಹೀಗೆ ಹಲವು ರೀತಿಯ ವ್ಯಾಯಾಮಗಳನ್ನು ನಾವು ರೂಢಿಸಿಕೊಂಡಿರುತ್ತೇವೆ. ಇವುಗಳಲ್ಲೊಂದು ಜಾಗಿಂಗ್. ನಿಧಾನಗತಿಯ ಓಟವನ್ನು ಜಾಗಿಂಗ್ ಎಂದು ಕರೆಯಲಾಗುತ್ತದೆ. ಈ ವ್ಯಾಯಾಮದಿಂದ ಹೃದಯರಕ್ತನಾಳದ ಚಟುವಟಿಕೆ ಸುಸೂತ್ರವಾಗುವುದಲ್ಲದೆ, ಆರೋಗ್ಯ ಸುಧಾರಿಸುತ್ತದೆ. ನಿದ್ದೆಯಿಂದ ಎದ್ದ ನಂತರ ನಾವು ಪ್ರತಿದಿನ ಅರ್ಧ ಗಂಟೆ ಜಾಗಿಂಗ್ ಮಾಡಬೇಕು.
ಹೃದಯ ರಕ್ತನಾಳದ ಆರೋಗ್ಯಕ್ಕೆ ಪ್ರಯೋಜನಕಾರಿ
ಪ್ರತಿದಿನ ನಿಯಮಿತವಾಗಿ ಜಾಗಿಂಗ್ ಮಾಡಿದರೆ, ಹೃದಯ ಮತ್ತು ಶ್ವಾಸಕೋಶಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಏಕೆಂದರೆ ಈ ವ್ಯಾಯಾಮವು ಹೃದಯರಕ್ತನಾಳದ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಹೃದಯದ ಸ್ನಾಯುಗಳನ್ನು ಬಲಪಡಿಸುವ ಜೊತೆಗೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.
ತೂಕ ನಿಯಂತ್ರಣ
ಜಾಗಿಂಗ್, ಕ್ಯಾಲೊರಿಗಳನ್ನು ಬರ್ನ್ ಮಾಡಲು ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಉತ್ತಮ ಮಾರ್ಗವಾಗಿದೆ. ಪ್ರತಿದಿನ 30 ನಿಮಿಷಗಳ ಕಾಲ ಮಧ್ಯಮ ವೇಗದಲ್ಲಿ ಓಡುವುದು ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಈ ಮೂಲಕ ಸುಮಾರು 300-400 ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು.
ಮಾನಸಿಕ ಆರೋಗ್ಯ ಸುಧಾರಿಸುತ್ತದೆ
ಮಾನಸಿಕ ಆರೋಗ್ಯಕ್ಕೂ ಜಾಗಿಂಗ್ ಪ್ರಯೋಜನಕಾರಿ. ಇದು ಒತ್ತಡ, ಆತಂಕ ಮತ್ತು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜಾಗಿಂಗ್ ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದನ್ನು ಸಾಮಾನ್ಯವಾಗಿ ‘ಫೀಲ್-ಗುಡ್’ ಹಾರ್ಮೋನುʼ ಗಳು ಎಂದು ಕರೆಯಲಾಗುತ್ತದೆ. ಇದು ಮನಸ್ಥಿತಿಯನ್ನು ಸುಧಾರಿಸಲು ಮತ್ತು ಉತ್ತಮ ನಿದ್ರೆಯನ್ನು ಉತ್ತೇಜಿಸಲು ಸಹಕಾರಿಯಾಗಿದೆ.
ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
ನಿಯಮಿತ ಜಾಗಿಂಗ್ ಮಾಡುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಸುಧಾರಿಸುತ್ತದೆ. ಇದು ಪ್ರತಿಕಾಯಗಳು ಮತ್ತು ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸಲಬಲ್ಲದು. ಇವು ಅನೇಕ ರೀತಿಯ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಜ್ವರ, ಶೀತ, ಕೆಮ್ಮಿನಂತಹ ಸೋಂಕುಗಳು ಕಡಿಮೆಯಾಗುತ್ತವೆ.