ಮಲೆನಾಡಿನ ಪ್ರಮುಖ ಪ್ರವಾಸಿತಾಣ ಜೋಗ ಜಲಪಾತ ಬೇಸಿಗೆಯಲ್ಲಿಯೂ ಜೀವಳಕೆಯೊಂದ ಕಂಗೊಳಿಸುತ್ತಿದೆ. ಜಲಪಾತ ಧುಮ್ಮಿಕ್ಕಿ ಹರಿಯುವ ರಭಸವಿಲ್ಲದಿದ್ದರೂ ಶರಾವತಿ ಕಣಿವೆಯಲ್ಲಿ ಆಗಾಗ ಮಳೆಯಾಗುತ್ತಿರುವುದರಿಂದ ಹಸಿರು ಕಾನನದ ನಡುವೆ ಜೋಗ ರಮಣೀಯವಾಗಿ ಕಂಡುಬರುತ್ತಿದೆ.
ಒಂದೆಡೆ ಜೋಗ ಜಲಪಾತದ ವಿಹಂಗಮ ದೃಶ್ಯ, ಮತ್ತೊಂದೆಡೆ ಮಂಜು ಕವಿದವಾತಾವರಣ, ಇಬ್ಬನಿಯ ಸಿಂಚನ ಪ್ರವಾಸಿಗರನ್ನು ಇನ್ನಷ್ಟು ಮುದಗೊಳಿಸುತ್ತಿದೆ.
ಶರಾವತಿ, ಲಿಂಗನಮಕ್ಕಿ, ಗೇರುಸೊಪ್ಪ ಹಾಗೂ ಸುತ್ತಮುತ್ತಲೂ ಕಳೆದ ನಾಲ್ಕು ದಿನಗಳಿಂದ ಮಳೆಯಾಗುತ್ತಿದ್ದು, ಜೋಗದ ಸುತ್ತಮುತ್ತ ಅರಣ್ಯ ಪ್ರದೇಶ ಮಂಜಿನ ಹೊದಿಕೆಯನ್ನು ಹೊದ್ದು ಕುಳಿತಂತೆ ಭಾಸವಾಗುತ್ತಿದೆ. ಅದರಲ್ಲಿಯೂ ಜೋಗಜಲಪಾತದ ಬಳಿ ಪ್ರಕೃತಿ ಸೌಂದರ್ಯ, ಜಲಧಾರೆಯಿಂದ ಹೊರಹೊಮ್ಮುತ್ತಿರುವ ನೀರಿನ ಸಿಂಚನ ಮನಸ್ಸಿಗೆ ಇನ್ನಷ್ಟು ಹಿತ, ಶಾಂತಿ-ಸಮಾಧಾನವನ್ನು ನೀಡುವಂತಿದೆ. ಇದೇ ಕಾರಣಕ್ಕೆ ಬೇಸಿಗೆಯಲ್ಲಿಯೂ ಜೋಗ ಜಲಪಾತ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಪ್ರತಿದಿನ ಸಾವಿರಾರು ಜನರು ಜೋಗಕ್ಕೆ ಭೇಟಿ ನೀಡುತ್ತಿದ್ದಾರೆ.