ದಾವಣಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ವತಿಯಿಂದ ಪ್ರತಿನಿತ್ಯ ಹಾಗೂ ವಾರಾಂತ್ಯಗಳಲ್ಲಿ ಕೋಟೆ ನಗರಿ ಚಿತ್ರದುರ್ಗ, ವಾಣಿವಿಲಾಸ ಸಾಗರ, ವಿಜಯನಗರ ವೈಭವ ಸಾರುವ ಹಂಪಿ, ಶಿರಸಿ ಹಾಗೂ ಜೋಗ್‍ಫಾಲ್ಸ್ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ವಿಶೇಷ ಪ್ಯಾಕೇಜ್ ಸಾರಿಗೆ ಸೌಕರ್ಯವನ್ನು ಪ್ರಯಾಣಿಕರ ಹಿತದೃಷ್ಟಿಯಿಂದ ಕಲ್ಪಿಸಲಾಗಿದೆ.
ದಾವಣಗೆರೆಯಿಂದ ಪ್ರತಿ ಭಾನುವಾರ ಬೆಳಗ್ಗೆ 7 ಕ್ಕೆ ಹೊರಡುವ ಬಸ್ ಚಿತ್ರದುರ್ಗದ ಕೋಟೆ, ಮುರುಘಾಮಠ, ಚಂದ್ರವಳ್ಳಿ ಹಾಗೂ ಹಿರಿಯೂರು ಸಮೀಪದ ವಾಣಿವಿಲಾಸ ಸಾಗರ ಜಲಾಶಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ರಾತ್ರಿ 8 ಗಂಟೆಗೆ ಹಿಂದಿರುಗಲಿದೆ. ಒಟ್ಟು ಪ್ರಯಾಣ ದರ ರೂ. 350 ನಿಗದಿಪಡಿಸಲಾಗಿದೆ.
ದಾವಣಗೆರೆಯಿಂದ ಪ್ರತಿ ಭಾನುವಾರ ಬೆಳಗ್ಗೆ 7 ಕ್ಕೆ ಹೊರಡುವ ಬಸ್ ಹೊಸಪೇಟೆ, ಹಂಪಿ, ಕಮಲಾಪುರ, ಹುಲಿಗಿ ದೇವಸ್ಥಾನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ರಾತ್ರಿ 9 ಗಂಟೆಗೆ ದಾವಣಗೆರೆಗೆ ಹಿಂದಿರುಗಲಿದೆ. ಪ್ರಯಾಣ ದರ ರೂ. 500 ನಿಗದಿಪಡಿಸಲಾಗಿದೆ.
ದಾವಣಗೆರೆ, ಹರಿಹರದಿಂದ ಆಗಸ್ಟ್ 1 ರಿಂದ ಪ್ರತಿನಿತ್ಯ ಬೆಳಿಗ್ಗೆ 7 ಗಂಟೆಗೆ ಹೊರಡುವ ಬಸ್ ಶಿರಸಿಯ ಮಾರಿಕಾಂಬ ದೇವಿಯ ದರ್ಶನ ಮಾಡಿಸಿ, ಜೋಗಫಾಲ್ಸ್ ವೀಕ್ಷಣೆಗೆ ಅವಕಾಶ ಮಾಡಿಕೊಡಲಿದೆ. ದಾವಣಗೆರೆಗೆ ರಾತ್ರಿ 8 ಗಂಟೆಗೆ ಹಿಂದಿರುಗಲಿದ್ದು, 500 ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ.
ಮುಂಗಡ ಬುಕ್ಕಿಂಗ್ ಕೌಂಟರ್ ಗಳಲ್ಲಿ ಹಾಗೂ ಆನ್‍ಲೈನ್ ಮೂಲಕವೂ ಮುಂಗಡ ಸೀಟು ಕಾಯ್ದಿರಿಸುವ ಸೌಕರ್ಯ ಕಲ್ಪಿಸಲಾಗಿದೆ. ಪ್ರಯಾಣಿಕರು ಈ ವಿಶೇಷ ಪ್ಯಾಕೇಜ್ ಸಾರಿಗೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕ.ರಾ.ರ.ಸಾ.ನಿಗಮ ದಾವಣಗೆರೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.