ದೇಶದ ಐಟಿ ಕ್ಷೇತ್ರ ಬಿಕ್ಕಟ್ಟಿಗೆ ಸಿಲುಕಿದೆ. ಐಟಿ ಕ್ಷೇತ್ರದಲ್ಲಿ ಉದ್ಯೋಗ ಕಡಿಮೆಯಾಗ್ತಿದೆ. ಜಾಗತಿಕ ಮಟ್ಟದಲ್ಲಿ ಆಗ್ತಿರುವ ಮಂದಗತಿ ಬೆಳವಣಿಗೆ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಐಟಿ ವಲಯದಲ್ಲಿ ಬಿರುಗಾಳಿ ಎಬ್ಬಿಸಲು ಮುಖ್ಯ ಕಾರಣವಾಗಿದೆ. ಇದ್ರಿಂದಾಗಿಯೇ ಐಟಿ ಉದ್ಯೋಗಿಗಳು ಸಮಸ್ಯೆ ಎದುರಿಸುವಂತಾಗಿದೆ. ಅನೇಕ ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಒಂದು ಕಡೆ ಐಟಿ ಕಂಪನಿಗಳು ಉದ್ಯೋಗ ಕಡಿತ ಮಾಡ್ತಿದ್ದರೆ ಮತ್ತೊಂದು ಕಡೆ ಯಾವುದೇ ಹೊಸ ನೇಮಕಾತಿಯನ್ನೂ ಮಾಡ್ತಿಲ್ಲ. ಇದು ದೊಡ್ಡ ಹೊಡೆತ ನೀಡಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಡಿಸೆಂಬರ್ 2022 ಕ್ಕೆ ಹೋಲಿಸಿದರೆ ಡಿಸೆಂಬರ್ 2023 ರ ವೇಳೆಗೆ ಐಟಿ ವಲಯದಲ್ಲಿ ನೇಮಕಾತಿಯಲ್ಲಿ ಶೇಕಡಾ 21 ರಷ್ಟು ಕುಸಿತ ಕಂಡುಬಂದಿದೆ.
ಈ ಅವಧಿಯಲ್ಲಿ ಎಐ ವಲಯದಲ್ಲಿ ಬದಲಾವಣೆ ಕಂಡು ಬಂದಿದೆ. ಉದ್ಯೋಗಗಳ ಸೃಷ್ಟಿ ಹೆಚ್ಚಾಗಿದೆ. ಫುಲ್ ಸ್ಟಾಕ್ ಡೇಟಾ ಸೈಂಟಿಸ್ಟ್, ಐಟಿ ಇನ್ಫ್ರಾಸ್ಟ್ರಕ್ಚರ್ ಇಂಜಿನಿಯರ್ ಮತ್ತು ಆಟೊಮೇಷನ್ ಇಂಜಿನಿಯರ್‌ನಂತಹ ಉದ್ಯೋಗಗಳಲ್ಲಿ ಕೂಡ ಇಳಿಕೆ ಕಂಡು ಬಂದಿದೆ ಎಂದು ನೌಕ್ರಿ ಜಾಬ್ ಸ್ಪೀಕ್ ಇಂಡೆಕ್ಸ್ ವರದಿ ಮಾಡಿದೆ. ಇನ್ನು ಬಿಪಿಒ, ಶಿಕ್ಷಣ, ಚಿಲ್ಲರೆ ವ್ಯಾಪಾರ ಮತ್ತು ಆರೋಗ್ಯ ಕ್ಷೇತ್ರಗಳಲ್ಲೂ ನಿಧಾನಗತಿ ಇದೆ. ಪ್ರತಿ ಕ್ಷೇತ್ರದಲ್ಲಿ ಕ್ರಮವಾಗಿ ಶೇಕಡಾ 17, 11, 11 ಮತ್ತು 10 ರಷ್ಟು ಉದ್ಯೋಗ ಕಡಿತವಾಗಿದೆ.
ಖುಷಿ ವಿಷ್ಯವೆಂದ್ರೆ ಫಾರ್ಮಾ ವಲಯಗಳಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಾಗಿದೆ. ನವೆಂಬರ್ 2023 ರಿಂದ ಡಿಸೆಂಬರ್ 2023 ರವರೆಗೆ ಶೇಕಡಾ 2 ರಷ್ಟು ಹೆಚ್ಚಳ ಕಂಡು ಬಂದಿದೆ. ಫಾರ್ಮಾ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿರುವ ಕಾರಣ ಮೆಟ್ರೋ ನಗರಗಳಿಗಿಂತ ಸಣ್ಣ ನಗರದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.