alex Certify ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸುದ್ದಿ: 10 ಸಾವಿರ ಜನರಿಗೆ ಉದ್ಯೋಗ ಪತ್ರ: ಡಿ.1 ರಿಂದ ‘ಸುಶಾಸನ ಮಾಸ’; ಪರೀಕ್ಷಾ ಪ್ರಾಧಿಕಾರಕ್ಕೆ ಹೊಸ ರೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸುದ್ದಿ: 10 ಸಾವಿರ ಜನರಿಗೆ ಉದ್ಯೋಗ ಪತ್ರ: ಡಿ.1 ರಿಂದ ‘ಸುಶಾಸನ ಮಾಸ’; ಪರೀಕ್ಷಾ ಪ್ರಾಧಿಕಾರಕ್ಕೆ ಹೊಸ ರೂಪ

ಬೆಂಗಳೂರು: ದಿವಂಗತ ಮಾಜಿ ಪ್ರಧಾನಿ ವಾಜಪೇಯಿಯವರ ಸ್ಮರಣಾರ್ಥವಾಗಿ ತಮ್ಮ ನೇತೃತ್ವದ ಉನ್ನತ ಶಿಕ್ಷಣ, ಐಟಿ-ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆಗಳಲ್ಲಿ ಡಿ.1 ರಿಂದ ‘ಸುಶಾಸನ ಮಾಸ’ವನ್ನು ಆಚರಿಸಲಾಗುವುದು ಎಂದು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಈ ಸಂಬಂಧವಾಗಿ ಹಮ್ಮಿಕೊಳ್ಳಬೇಕಿರುವ ಕಾರ್ಯಕ್ರಮಗಳನ್ನು ಕುರಿತು ಚರ್ಚಿಸಲು ಅವರು ಮೂರೂ ಇಲಾಖೆಗಳ ಉನ್ನತಾಧಿಕಾರಿಗಳ ಜತೆ ಗುರುವಾರ ಮಹತ್ತ್ವದ ಸಭೆ ನಡೆಸಿದರು.

ನಂತರ ಮಾತನಾಡಿದ ಅವರು, ಸುಶಾಸನ ಮಾಸಾಚರಣೆ ಅಂಗವಾಗಿ ತಮ್ಮ ಇಲಾಖೆಗಳಲ್ಲಿನ ಹಲವು ಸುಧಾರಣಾ ಕ್ರಮಗಳನ್ನು ಇಡೀ ತಿಂಗಳು‌ ಜನರಿಗೆ ತಿಳಿಸುವ ಸಲುವಾಗಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಡಿ.25 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಅಂದು ಮುಖ್ಯಮಂತ್ರಿ ಭಾಗವಹಿಸಲಿದ್ದಾರೆ. ಅಂದು ಹಲವು ಮಹತ್ವದ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಂಪೂರ್ಣವಾಗಿ ಹೊಸ ರೂಪ ನೀಡಲಾಗುವುದು. ಜತೆಗೆ ಕೌಶಲಾಭಿವೃದ್ಧಿ ಇಲಾಖೆಯ ಮೂಲಕ 10 ಸಾವಿರ ಜನರಿಗೆ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸುವ ಸಂಬಂಧ ನೇಮಕಾತಿ ಪತ್ರಗಳನ್ನು ನೀಡಲಾಗುವುದು. ಹಾಗೆಯೇ, ಜಿಟಿಟಿಸಿ ಸುವರ್ಣ ಸಂಭ್ರಮದ ಅಂಗವಾಗಿ ಕಟ್ಟಿರುವ ನೂತನ ಕಟ್ಟಡವನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಗುವುದು. ಅಲ್ಲದೆ, ತಾಂತ್ರಿಕ ಶಿಕ್ಷಣ ಇಲಾಖೆಗೆ ನೇಮಕಾತಿ ಮತ್ತು ವೃಂದ ನಿಯಮಗಳನ್ನು 15 ವರ್ಷಗಳ ನಂತರ ರೂಪಿಸಲಾಗುತ್ತಿದೆ ಎಂದರು.

ಸುಶಾಸನ ಮಾಸಾಚರಣೆಯ ಅಂಗವಾಗಿ, ಉತ್ತಮ ವಿ.ವಿ.ಗಳು ಸೇರಿದಂತೆ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಗಳನ್ನು ನೀಡುವ ಉದ್ದೇಶ ಇದೆ. ಈ ನಿಟ್ಟಿನಲ್ಲಿ ಸಿದ್ಧತೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದಲ್ಲದೆ, ಎಲ್ಲ ಕಾಲೇಜುಗಳಲ್ಲೂ ಎನ್‌ಇಪಿ ಮತ್ತು ಅದರ ಪ್ರಗತಿ ಕುರಿತು ಪ್ರಬಂಧ ಮತ್ತು ಚರ್ಚಾಸ್ಪರ್ಧೆಗಳನ್ನು ಆಯೋಜಿಸಲು ಸಚಿವರು ಸೂಚಿಸಿದರು. ಜತೆಗೆ, ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಏಳು ಹೊಸ ವಿ.ವಿ.ಗಳಲ್ಲಿ ಆಗಬೇಕಿರುವ ಹುದ್ದೆಗಳ ನೇಮಕಾತಿಗೆ ಅನುಮೋದನೆ ಕೊಡಲಾಗುವುದು ಎಂದು ಅವರು ವಿವರಿಸಿದರು.

ಬದಲಾದ ಕಾಲಮಾನದಲ್ಲಿ ಎಲ್ಲ ಇಲಾಖೆಗಳೂ ಸುಸ್ಥಿರ ಮತ್ತು ಪಾರದರ್ಶಕ ಮಾದರಿಯಲ್ಲಿ ಉತ್ತರದಾಯಿತ್ವದೊಂದಿಗೆ ಕೆಲಸ ಮಾಡಬೇಕಾದ ಸವಾಲಿದೆ. ಇದಕ್ಕಾಗಿ ಮೂರೂ ಇಲಾಖೆಗಳಲ್ಲಿ ಸೋಶಿಯಲ್‌ ಮೀಡಿಯಾವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸುವ ಸಂಸ್ಕೃತಿಯನ್ನು ತರಲಾಗುವುದು ಎಂದು ಅವರು ನುಡಿದರು.

ಉನ್ನತ ಶಿಕ್ಷಣ ಇಲಾಖೆಯಲ್ಲಿ ಪ್ರಾಧ್ಯಾಪಕರ ಬಡ್ತಿ ಇತ್ಯಾದಿ ವಿಚಾರಗಳು ಬಹುಕಾಲದಿಂದ ನನೆಗುದಿಗೆ ಬಿದ್ದಿವೆ. ಸುಶಾಸನ ಮಾಸಾಚರಣೆ ಸಂದರ್ಭದಲ್ಲಿ ಅವುಗಳನ್ನು ಬಗೆಹರಿಸಲಾಗುವುದು. ಇದರ ಜತೆಗೆ ಸುಗಮ ಮತ್ತು ಉತ್ತಮ ಆಡಳಿತದ ಅಂಗವಾಗಿ ತಂದಿರುವ ಸಮಗ್ರ ವಿವಿ ನಿರ್ವಹಣಾ ತಂತ್ರಾಂಶದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಜೀವನೋಪಾಯ ಇಲಾಖೆಯಡಿ ಬರುವ ಸ್ವಸಹಾಯ ಸಂಘಗಳು ರಾಜ್ಯದ ಅರ್ಥಿಕ ಅಭಿವೃದ್ಧಿಗೆ ಮಹತ್ತ್ವದ ಕಾಣಿಕೆ ನೀಡುತ್ತಿವೆ. ಇವುಗಳನ್ನು ಮತ್ತಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು. ಸುಶಾಸನ ಮಾಸಾಚರಣೆ ಅಂಗವಾಗಿ ಅರಿವು ಮತ್ತು ಜಾಗೃತಿ ಎರಡನ್ನೂ ಸಾಧಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ ತಿಮ್ಮೇಗೌಡ, ಐಟಿಬಿಟಿ ಇಲಾಖೆ ಹೆಚ್ವುವರಿ ಮುಖ್ಯ ಕಾರ್ಯದರ್ಶಿ‌ ರಮಣರೆಡ್ಡಿ, ಕೌಶಲ್ಯಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ, ಐಟಿಬಿಟಿ ನಿರ್ದೇಶಕಿ ಮೀನಾ‌ ನಾಗರಾಜ, ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತೆ ಜ್ಯೋತಿ, ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ರವಿ ಡಿ.ಚನ್ನಣ್ಣನವರ್, ಕೆಇಎ ಆಡಳಿತಾಧಿಕಾರಿ ಶಿವಕುಮಾರ ಸೇರಿದಂತೆ ಇತರರು ಇದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...