ನವದೆಹಲಿ: ಉದ್ಯೋಗಿಯ ವಿಚ್ಛೇದಿತ ಪುತ್ರಿಗೆ ಅನುಕಂಪ ಆಧಾರಿತ ನೌಕರಿ ಇಲ್ಲವೆಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸರ್ಕಾರಿ ನೌಕರ ಮೃತಪಟ್ಟ ನಂತರ ಅವರ ಪುತ್ರಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ಪಡೆಯಲು ಅರ್ಹತೆ ಹೊಂದಿರುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಅನಿರುದ್ಧ್ ಬೋಸ್ ಅವರುಗಳಿದ್ದ ನ್ಯಾಯಪೀಠ ಮಹತ್ವದ ತೀರ್ಪು ನೀಡಿದೆ.
ಮಂಡ್ಯ ಜಿಲ್ಲಾ ಖಜಾನೆ ಇಲಾಖೆ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದ ಪಿ. ಭಾಗ್ಯಮ್ಮ 2012 ರ ಮಾರ್ಚ್ 25 ರಂದು ಮೃತಪಟ್ಟಿದ್ದರು.
ಅವರ ಪುತ್ರಿಗೆ ಅನುಕಂಪದ ಆಧಾರಿತ ಉದ್ಯೋಗ ನೀಡುವಂತೆ ಹೈಕೋರ್ಟ್ ನಿರ್ದೇಶನ ನೀಡಿದ್ದು, ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಖಜಾನೆ ಇಲಾಖೆಯ ನಿರ್ದೇಶಕರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಪೀಠ, ಉದ್ಯೋಗಿಯ ವಿಚ್ಛೇದಿತ ಪುತ್ರಿಗೆ ಅನುಕಂಪ ಆಧಾರಿತ ನೌಕರಿ ಇಲ್ಲವೆಂದು ಸ್ಪಷ್ಟಪಡಿಸಿದ್ದು, ಮೃತರ ಪುತ್ರಿ ಅನುಕಂಪ ಆಧಾರಿತ ಉದ್ಯೋಗ ಪಡೆಯಲು ಅರ್ಹರಲ್ಲ ಎಂದು ಹೇಳಿದೆ.
ಕರ್ನಾಟಕ ನಾಗರೀಕ ಸೇವಾ ಅನುಕಂಪ ಆಧಾರಿತ ನೇಮಕಾತಿ ನಿಯಮ 1996 ಉಲ್ಲೇಖಿಸಿದ ನ್ಯಾಯಪೀಠ, ನಿಯಮದ ಅನ್ವಯ ಸರ್ಕಾರಿ ಉದ್ಯೋಗಿ ನಿಧನದ ನಂತರ ವಿಚ್ಛೇದಿತರಿಗೆ ಅನುಕಂಪ ಆಧಾರಿತ ಕೆಲಸ ನೀಡಲು ಅವಕಾಶವಿಲ್ಲ. ಉದ್ಯೋಗಿಯನ್ನು ಅವಲಂಬಿಸಿದ್ದವರು ಮತ್ತು ಅವರೊಂದಿಗೆ ವಾಸವಿದ್ದ ಅವಿವಾಹಿತ ಅಥವಾ ವಿಧವಾ ಪುತ್ರಿಗೆ ಮಾತ್ರ ಅನುಕಂಪದ ಉದ್ಯೋಗ ನೀಡಬಹುದು ಎಂದು ನ್ಯಾಯಪೀಠ ಹೇಳಿದೆ.
ಭಾಗ್ಯಮ್ಮ ಮೃತಪಟ್ಟ ಸಂದರ್ಭದಲ್ಲಿ ಅವರ ಪುತ್ರಿ ವಿವಾಹಿತರಾಗಿದ್ದರು. 2012 ರ ಸೆಪ್ಟೆಂಬರ್ ನಲ್ಲಿ ಪರಸ್ಪರ ಸಮ್ಮತಿಯೊಂದಿಗೆ ಡೈವೋರ್ಸ್ ಪಡೆದುಕೊಂಡಿದ್ದರು. 2013ರ ಮಾರ್ಚ್ ನಲ್ಲಿ ಮಂಡ್ಯ ನ್ಯಾಯಾಲಯ ಅವರ ಡೈವೋರ್ಸ್ ಅರ್ಜಿಯನ್ನು ಮಾನ್ಯ ಮಾಡಿದ್ದು, ಇದಾದ ಮರುದಿನವೇ ಅನುಕಂಪ ಆಧಾರಿತ ಉದ್ಯೋಗಕ್ಕಾಗಿ ಅವರು ಅರ್ಜಿ ಸಲ್ಲಿಸಿದ್ದರು.