ಬೆಂಗಳೂರು: ಕೊರೋನಾ ಕಾರಣದಿಂದ ಆರ್ಥಿಕ ಸಂಕಷ್ಟ ಉಂಟಾಗಿದ್ದು, ಆರ್ಥಿಕತೆ ನೆಪ ಮುಂದಿಟ್ಟುಕೊಂಡು ಅನೇಕ ನೇಮಕಾತಿಗಳ ಅಧಿಸೂಚನೆ ರದ್ದುಪಡಿಸಲಾಗಿದೆ.
ಇದರಿಂದಾಗಿ ಸರಕಾರದ ನಿರೀಕ್ಷೆಯಲ್ಲಿದ್ದವರಿಗೆ ಆತಂಕ ಎದುರಾಗಿದೆ. ವಯೋಮಿತಿ ಮೀರಿ ಕೆಲಸ ಕೈತಪ್ಪುವ ಭೀತಿಯಲ್ಲಿ ಲಕ್ಷಾಂತರ ಅಭ್ಯರ್ಥಿಗಳು ಇದ್ದಾರೆ. ಕೊರೋನಾ ಕಾರಣದಿಂದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿರುವುದನ್ನು ನೆಪ ಮಾಡಿಕೊಂಡ ರಾಜ್ಯ ಸರ್ಕಾರ ವಿವಿಧ ನೇಮಕಾತಿಗಳಿಗೆ ಹೊರಡಿಸಿದ್ದ ಅಧಿಸೂಚನೆ ರದ್ದು ಮಾಡಿದೆ.
ಇದರಿಂದಾಗಿ ಕೆಲಸಕ್ಕಾಗಿ ಕಾಯುತ್ತಿದ್ದವರಿಗೆ ನಿರಾಸೆಯಾಗಿದ್ದು, ವಯೋಮಿತಿ ಮೀರುವ ಆತಂಕದಿಂದ ಕಂಗಾಲಾಗಿದ್ದಾರೆ. 2017 -18 ನೇ ಸಾಲಿನಲ್ಲಿ ಎಫ್ಡಿಎ, ಎಸ್ಡಿಎ 1812 ಹುದ್ದೆಗಳಿಗೆ ಪರೀಕ್ಷೆ ಬರೆದು ಆಯ್ಕೆಯಾದ ಅಭ್ಯರ್ಥಿಗಳು ಕೂಡ ಸಂಕಷ್ಟ ಎದುರಿಸುವಂತಾಗಿದೆ. ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳ ಉಪನ್ಯಾಸಕರ ನೇಮಕ ಪ್ರಕ್ರಿಯೆ ತಡೆ ಹಿಡಿಯಲಾಗಿದೆ. ಲೋಕೋಪಯೋಗಿ ಇಲಾಖೆ, ಮೆಟ್ರೋ ರೈಲು ನಿಗಮ, ಕರ್ನಾಟಕ ವಿದ್ಯುತ್ ನಿಗಮ, ಲೋಕಸೇವಾ ಆಯೋಗ ಮೊದಲಾದವುಗಳ ನೇಮಕಾತಿಗಳನ್ನು ರದ್ದುಪಡಿಸಲಾಗಿದೆ ಎಂದು ಹೇಳಲಾಗಿದೆ.