ಬೆಂಗಳೂರು: ಇಲಾಖೆಗಳ ವಿಲೀನ, ಅನಗತ್ಯ ಹುದ್ದೆಗಳ ರದ್ದು ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ. ಆಡಳಿತ ಸುಧಾರಣೆ ಭಾಗವಾಗಿ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಶಿಫಾರಸು ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. ಹಿಂದಿನ ವೇತನ ಆಯೋಗದ ಎರಡನೇ ವರದಿಯಲ್ಲಿ ಕಾರ್ಯಾಚರಣೆ ವೃಂದ ಬಲಪಡಿಸಬೇಕು, ಸಹಾಯಕ ಸಿಬ್ಬಂದಿ ವೃಂದ ಕಡಿಮೆ ಮಾಡಬೇಕೆಂಬ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಸಹಕಾರ ಇಲಾಖೆಯಲ್ಲಿ 300ಕ್ಕೂ ಹೆಚ್ಚು ಹುದ್ದೆಗಳನ್ನು ರದ್ದು ಮಾಡಲಾಗುತ್ತೆ. ಇವುಗಳಲ್ಲಿ 50 ದ್ವಿತೀಯ ದರ್ಜೆ ಸಹಾಯಕರು, 200 ಡಿ ಗ್ರೂಪ್ ನೌಕರರು, 32 ಶೀಘ್ರ ಲಿಪಿಕಾರರು, 30 ಡೇಟಾ ಎಂಟ್ರಿ ಆಪರೇಟರ್ ಗಳು ಸೇರಿದ್ದಾರೆ.
ಸಹಕಾರ ಸಂಘಗಳ ನಿರೀಕ್ಷೆಕರ ಹುದ್ದೆಗಳ ರದ್ದತಿ ಮಾಡುವ ಬಗ್ಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಸಾರ್ವಜನಿಕ ಉದ್ದಿಮೆಗಳ ಇಲಾಖೆ, ಡಿಪಿಎಆರ್ ಜನಸ್ಪಂದನ ಕೋಶವನ್ನು ರದ್ದು ಮಾಡಲಾಗಿದೆ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟಾರೆ ಶೇಕಡ 34 ರಷ್ಟು ಹುದ್ದೆಗಳು ಖಾಲಿ ಇವೆ. ಮಂಜೂರಾದ 7.69 ಲಕ್ಷ ಹುದ್ದೆಗಳಿದ್ದು, 5.11 ಲಕ್ಷ ಮಂದಿ ನೌಕರರಿದ್ದಾರೆ. 2.58 ಲಕ್ಷ ಖಾಲಿ ಹುದ್ದೆಗಳು ಇವೆ ಎಂದು ಹೇಳಲಾಗಿದೆ. ಅನಗತ್ಯ ಹುದ್ದೆಗಳನ್ನು ರದ್ದು ಮಾಡಲಾಗುತ್ತಿದ್ದು, ಸರ್ಕಾರದ ಮೇಲಿನ ಆರ್ಥಿಕ ಹೊರೆ ತಗ್ಗಿಸಬೇಕಿದೆ. ಇ- ಆಫೀಸ್ ತಂತ್ರಾಂಶ ಹಿನ್ನೆಲೆಯಲ್ಲಿ ಅಧಿಕಾರಿಗಳೇ ಟೈಪಿಂಗ್ ಮಾಡಬೇಕು. ಡಿಕ್ಟೇಷನ್ ನೀಡುವಂತಿಲ್ಲ ಎನ್ನಲಾಗಿದೆ.