ಬೆಂಗಳೂರು: ಕೆಲಸ ಹುಡುಕಿ ಬೆಂಗಳೂರಿಗೆ ಬರುತ್ತಿದ್ದ ಗ್ರಾಮೀಣ ಪ್ರದೇಶದ ಯುವತಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಖತರ್ನಾಕ್ ವ್ಯಕ್ತಿಯೊಬ್ಬ ಕೆಲಸದ ಆಮಿಷವೊಡ್ಡಿ ಹಣ ಪಡೆದು ವಂಚಿಸಿ, ಬ್ಯಾಂಕಾಕ್ ನಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ ಆಸಾಮಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೋಹನ್ ಕುಮಾರ್ (53) ಬಂಧಿತ ಆರೋಪಿ. ಓದು ಮುಗಿಸಿ ಕೆಲಸಕ್ಕಾಗಿ ಬೆಂಗಳೂರಿಗೆ ಬರುತ್ತಿದ್ದ ಯುವತಿಯರಿಗೆ ಎಫ್ ಡಿಎ, ಎಸ್ ಡಿಎ ಪರೀಕ್ಷೆ, ಸರ್ಕಾರಿ ಕೆಲಸದ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ಹಣ ಪಡೆದು ಬಳಿಕ ಆರೋಪಿ ಎಸ್ಕೇಪ್ ಆಗುತ್ತಿದ್ದ.
ಹೀಗೆ ವಂಚಿಸಿದ ಹಣದಲ್ಲೇ ಬ್ಯಾಂಕಾಕ್ ಗೆ ಹೋಗಿ ಅಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ. ಈತನಿಂದ 7 ಲಕ್ಷ ರೂಪಾಯಿ ವಂಚನೆಗೆಗೊಳಗಾದ ಯುವತಿ ಗಿರಿಜಾ ನೀಡಿದ ದೂರಿನ ಮೇರೆಗೆ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಯುವತಿಗೆ ವಿಧಾನಸೌಧದಲ್ಲಿ ಅಧಿಕಾರಿಗಳ ಪರಿಚಯವಿದೆ. ನೇರ ನೇಮಕಾತಿ ಮಾಡಿಸುವುದಾಗಿ ನಂಬಿಸಿ ಆರೊಪಿ, 7 ಲಕ್ಷ ಹಣ ಪಡೆದಿದ್ದ. ಈ ಬಗ್ಗೆ ಯುವತಿ ದೂರು ನೀಡಿದ್ದರು.
ಬ್ಯಾಂಕಾಕ್ ನಿಂದ ಬೆಂಗಳೂರು ಏರ್ ಪೋರ್ಟ್ ಗೆ ಬಂದಿಳಿಯುತ್ತಿದ್ದಂತೆ ಆರೊಪಿ ಮೋಹನ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.