ಬೆಂಗಳೂರು: ಸಿಲಿಕಾನ್ ಸಿಟಿ, ರಾಜ್ಯ ರಾಜಧಾನಿ ಬೆಂಗಳೂರಿಗೆ ಕೆಲಸ ಹುಡುಕಿ ಬರುವ ಯುವಕ-ಯುವತಿಯರನ್ನೇ ಟಾರ್ಗೆಟ್ ಮಾಡಿ ಕೆಲಸದ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ಹಣ ದೋಚಿದ್ದ ಖತರ್ನಾಕ್ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಬಂಧಿತನನ್ನು ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಸಾವಿರಕ್ಕೂ ಹೆಚ್ಚು ಯುವಕ-ಯುವತಿಯರಿಗೆ ಕೆಲಸ ಕೊಡಿಸುವುದಾಗಿ ಹೇಳಿ ಅವರಿಂದಲೇ ಹಣ ಪಡೆದು ಎಸ್ಕೇಪ್ ಆಗಿದ್ದ.
ಪವನ್ ಕುಮಾರ್ ಹಾಗೂ ಗ್ಯಾಂಗ್ SIMAKH TECHNOLOGY ಮತ್ತು MONTY CORPS ಎಂಬ ಕಂಪನಿ ತೆರೆದಿದ್ದರು. ನಮ್ಮದೇ ಕಂಪನಿಯಲ್ಲಿ ಕೆಲಸ ಕೊಡುತ್ತೇವೆ ಎಂದು ನಿರುದ್ಯೋಗ ಯುವಕ-ಯುವತಿಯರನ್ನು ನಂಬಿಸಿ ಹಣ ಪಡೆಯುತ್ತಿದ್ದರು. ಆಂಧ್ರ ಮೂಲದ ವಿದ್ಯಾವಂತ ಯುವಕರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದರು. ಇದೇ ರೀತಿ ಕೆಲಸದ ಆಮಿಷವೊಡ್ಡಿ ಬರೋಬ್ಬರಿ 20 ಕೋಟಿ ಹಣವನ್ನು ಪವನ್ ಹಾಗೂ ಗ್ಯಾಂಗ್ ವಂಚಿಸಿದೆ.
ಆರಂಭದಲ್ಲಿ ವರ್ಷಕ್ಕೆ 5 ಲಕ್ಷ ಪ್ಯಾಕೇಜ್ ಎಂದು ಹೇಳಿ ಹಳೆ ಲ್ಯಾಪ್ ಟಾಪ್ ನ್ನು ಕೆಲಸಕ್ಕೆಸೇರಿಕೊಂಡವರಿಗೆ ಕೊಡುತ್ತಿದ್ದರು. ಆರಂಭದಲ್ಲಿ ಹಣ ಕಟ್ಟಬೇಕೆಂದು ಲಕ್ಷ ರೂಪಾಯಿ ಕಟ್ಟಿಸಿಕೊಳ್ಳುತ್ತಿದ್ದರು. ಬಳಿಕ ಕೆಲ ತಿಂಗಳು ಸಂಬಳವನ್ನು ಕೊಡುತ್ತಿದ್ದ ಗ್ಯಾಂಗ್ ಬಳಿಕ ಕಂಪನಿಯನ್ನೇ ಮುಚ್ಚಿ ಎಸ್ಕೇಪ್ ಆಗುತ್ತಿತ್ತು. ಹೀಗೆ ಬೆಂಗಳೂರಿನ ಹಲವೆಡೆಗಳಲ್ಲಿ ಕಂಪನಿ ತೆರೆದು ಮೋಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಹಣ ಕಳೆದುಕೊಂಡ ಯುವಕ-ಯುವತಿಯರು ವೈಟ್ ಫೀಲ್ಡ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ದೆಹಲಿಗೆ ತೆರಳಿ ತಲೆಮರೆಸಿಕೊಂಡಿದ್ದ ಆರೋಪಿ. ಆರೋಪಿ ಬಂಧನಕ್ಕೆ ಪ್ಲಾನ್ ಮಾಡಿದ ಪೊಲೀಸರು ಸಂತ್ರಸ್ತರಿಂದ ಕರೆ ಮಾಡಿಸಿ ನಿಮ್ಮ ಕಂಪನಿಯಲ್ಲಿ ಕೆಲಸಕ್ಕೆ ಸೇರಲು ಬಂದಿದ್ದು, ಲಕ್ಷ ಲಕ್ಷ ಹಣದ ಜೊತೆ ಸಿದ್ಧರಿರುವುದಾಗಿ ಹೇಳಿ ಬೆಂಗಳೂರಿಗೆ ಆರೋಪಿಯನ್ನು ಕರೆಸಿಕೊಂಡಿದ್ದಾರೆ. ಹಣದ ಆಸೆಗೆ ದೆಹಲಿಯಿಂದ ಬೆಂಗಳೂರಿಗೆ ಬಂದ ಪವನ್ ಕುಮಾರ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.