ಬೆಂಗಳೂರು: ಸರ್ಕಾರದ ನಾನಾ ಇಲಾಖೆಗಳ ಹುದ್ದೆಗಳ ನೇಮಕಾತಿಯಲ್ಲಿ ಬದಲಾವಣೆ ಮಾಡಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗ ಮುಂದಿನ ದಿನಗಳಲ್ಲಿ ಎಲ್ಲಾ ಹಂತದ ನೇಮಕಾತಿ ಪರೀಕ್ಷೆಗಳಲ್ಲಿ ನೆಗೆಟಿವ್ ಅಂಕ, ಇಂಗ್ಲಿಷ್ ಭಾಷೆ ಮತ್ತು ಕಂಪ್ಯೂಟರ್ ಜ್ಞಾನ ಸೇರಿಸಲಾಗಿದೆ.
ವೈದ್ಯಕೀಯ ಅಧಿಕಾರಿಗಳು, ಪಶು ವೈದ್ಯಾಧಿಕಾರಿಗಳು, ಇಂಜಿನಿಯರ್ ಹುದ್ದೆಗಳಿಗೆ ಸಂದರ್ಶನ ಇರುವುದಿಲ್ಲ. ಎರಡು ವಿಷಯದಲ್ಲಿ ಶೇಕಡ 100 ರಷ್ಟು ಅಂಕ ಪಡೆದರೂ ಒಂದು ವಿಷಯದಲ್ಲಿ ಶೇಕಡ 35 ಕ್ಕಿಂತ ಕಡಿಮೆ ಅಂಕ ಪಡೆದರೆ ಅರ್ಹತೆ ಇರುವುದಿಲ್ಲ.
ಕರ್ನಾಟಕ ನಾಗರೀಕ ಸೇವಾ ನಿಯಮಗಳು -2020 ರಾಜ್ಯ ಸರ್ಕಾರ ಜಾರಿ ಮಾಡಿದ್ದು, ಮುಂದಿನ ನೇಮಕಾತಿಗಳಿಗೆ ಅನ್ವಯವಾಗುವಂತೆ ಹೊಸ ನಿಯಮ ಜಾರಿಗೆ ತರಲಾಗಿದೆ. ಈ ಹಿಂದೆ ಎ ಮತ್ತು ಬಿ ವೃಂದದ ನೇಮಕಾತಿಗಳಿಗೆ ಮಾತ್ರ ನೆಗೆಟಿವ್ ಅಂಕ ನೀಡುವ ಪದ್ಧತಿ ಇತ್ತು. ಈಗ ಗ್ರೂಪ್ ಎ ಯಿಂದ ಗ್ರೂಪ್ ಡಿ ವರೆಗೆ ಎಲ್ಲ ಹುದ್ದೆ ನೇಮಕಾತಿ ಪ್ರಕ್ರಿಯೆಯಲ್ಲಿ ನಾಲ್ಕನೇ ಒಂದರಷ್ಟು ನೆಗೆಟಿವ್ ಅಂಕ ನೀಡಲಾಗುವುದು.
ಪ್ರಥಮ ದರ್ಜೆ ಸಹಾಯಕರು ಸೇರಿದಂತೆ ಸಿ ಮತ್ತು ಡಿ ದರ್ಜೆ ಹುದ್ದೆಗಳ ನೇಮಕಾತಿಯಲ್ಲಿ ಸಾಮಾನ್ಯ ಕನ್ನಡ, ಸಾಮಾನ್ಯ ಜ್ಞಾನ ಪತ್ರಿಕೆಗಳಿಗೆ ವಸ್ತುನಿಷ್ಠ ಬಹುಆಯ್ಕೆ ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು. ಎರಡು ಪತ್ರಿಕೆಗಳಲ್ಲಿ ನಿಗದಿಪಡಿಸಿದ ಒಟ್ಟು ಕಟ್ ಆಫ್ ಅಂಕಗಳಿಸಿದಲ್ಲಿ ಆಯ್ಕೆಗೆ ಅವಕಾಶ ಇತ್ತು. ಈಗ ಎಲ್ಲ ನೇಮಕಾತಿಗಳಲ್ಲಿ ಕಡ್ಡಾಯ ಕನ್ನಡ, ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ ಸೇರ್ಪಡೆ ಮಾಡಲಾಗಿದೆ. ಈ ಮೂರು ವಿಷಯಗಳಲ್ಲಿಯೂ ಶೇಕಡ 35 ರಷ್ಟು ಅಂಕ ಪಡೆಯುವುದು ಕಡ್ಡಾಯವಾಗಿರುತ್ತದೆ. ಮಾರ್ಚ್ 5 ರ ನಂತರದ ಎಲ್ಲಾ ನೇಮಕಾತಿ ಅಧಿಸೂಚನೆಗಳಿಗೆ ನಿಯಮಗಳು ಅನ್ವಯವಾಗಲಿವೆ ಎಂದು ಹೇಳಲಾಗಿದೆ.